ಕರಾವಳಿ-ಮಲೆನಾಡಿಗೆ ಹೊಸ ರೂಪ, 30-40 ವರ್ಷಗಳ ಬೇಡಿಕೆಯನ್ನು ಪರಿಗಣಿಸಲು ಸಂಪುಟ ಸಭೆ: ಸಿಎಂ ಡಿ.ಕೆ. ಶಿವಕುಮಾರ್
ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಂದು ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಲ್ಲಿನ ಶಾಸಕರು, ಸಂಸದರು ಭೇಟಿಯಾಗಿ ತಮ್ಮ ಬೇಡಿಕೆ, ಭಾವನೆ ಹೇಳಿಕೊಂಡಿದ್ದಾರೆ. ಅವರ ಬೇಡಿಕೆಗಳು ನನ್ನ ಮನಸ್ಸಿನಲ್ಲಿ ಇದೆ. ಸಂಪುಟ ಸಭೆಯಲ್ಲಿ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಮಾಡುತ್ತೇವೆ. ಕರಾವಳಿಯಲ್ಲಿ 340 ಕಿಮೀ ಉದ್ದಕ್ಕೆ ಕಡಲ ತೀರ ಇದೆ, ಇದನ್ನು ನಾವು ಅಭಿವೃದ್ಧಿಗೆ ಬಳಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ, ಕಸ್ತೂರಿ ರಂಗನ್ ವರದಿಯನ್ನು ನಮ್ಮ ಸರ್ಕಾರ ನಿರಾಕರಿಸಿತ್ತು. ಆದರೆ ಮತ್ತೆ ಜಾರಿಗೆ ತರುತ್ತಿರುವ ಕಾರಣ ಆ ಬಗ್ಗೆ ಮತ್ತು ಬರದ ವಿಚಾರದಲ್ಲಿ ವಿಶೇಷ ಅಧಿವೇಶನ ಕರೆಯಲಾಗಿದೆ. ಕಸ್ತೂರಿ ರಂಗನ್ ವರದಿ ಬಗ್ಗ ಆಯಾ ಭಾಗದ ಶಾಸಕರು ಅಭಿಪ್ರಾಯ ಮಂಡನೆಗೆ ಅವಕಾಶ ನೀಡಿದ್ದೇವೆ. ಎರಡು ದಿನಗಳ ಅಧಿವೇಶನದಲ್ಲಿ ಬರ ಮತ್ತು ಕಸ್ತೂರಿ ರಂಗನ್ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಅರಣ್ಯ ಸಚಿವರೂ ತಮ್ಮ ವರದಿಯನ್ನು ನೀಡಲಿದ್ದಾರೆ.
ಕಸ್ತೂರಿ ರಂಗನ್ ವರದಿ ಬಗ್ಗೆ ಅಲ್ಲಿನ ಪ್ರದೇಶದ ಜನರ ಜೊತೆ ಮಾತನಾಡುತ್ತೇನೆ. ನೇರವಾಗಿ ಅವರ ಬಳಿ ತೆರಳಿ ತಳಮಟ್ಟದಿಂದ ಜನರ ಅಭಿಪ್ರಾಯ ಸಂಗ್ರಹಿಸಲಿದ್ದೇನೆ. ಗ್ರೌಂಡ್ ರಿಯಾಲ್ಟಿ ತಿಳಿದುಕೊಂಡು ಅಧಿವೇಶನದಲ್ಲಿ ಉತ್ತರ ನೀಡಲಿದ್ದೇನೆ ಎಂದು ಮುಖ್ಯಮಂತ್ರಿ ಡಿಕೆಶಿ ಹೇಳಿದರು.
ಉಮರ್ ಖಲೀದ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಹೇಳಿಕೆ ವಿಚಾರದಲ್ಲಿ, ಆ ಬಗ್ಗೆ ನನಗೆ ಮಾಹಿತಿ ಇಲ್ಲ. ತಿಳಿದುಕೊಂಡು ಮಾತಾಡುತ್ತೇನೆ ಎಂದು ಹೇಳಿ ನಿರ್ಗಮಿಸಿದರು.