ಕ.ವಿ.ಪ್ರ.ನಿ.ನಿ ನೌಕರರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಮಂಗಳೂರು ಸದಸ್ಯರಿಗೆ ಶೇ.8.50 ಡಿವಿಡೆಂಡ್, 97.94 ಲಕ್ಷ ರೂ. ಲಾಭ
ಆರ್ಥಿಕ ವರ್ಷ 2025-26ನೇ ಸಾಲಿನಲ್ಲಿ ಸಹಕಾರಿ ಸಂಘವು 97.94 ಲಕ್ಷ ರೂ. ಲಾಭ ದಾಖಲಿಸಿದ್ದು ಸದಸ್ಯರಿಗೆ ಶೇ.8.50 ರಷ್ಟು ಲಾಭಾಂಶ ವಿತರಿಸಲಾಯಿತು ಎಂದು ಅಧ್ಯಕ್ಷತೆ ವಹಿಸಿದ್ದ ಶಾಂತಾನಂದ ಶೆಟ್ಟಿ ತಿಳಿಸಿದರು.
ಸಂಘವು 1036 ಸಕ್ರಿಯ ಸದಸ್ಯರನ್ನು ಹೊಂದಿದ್ದು, ವರ್ಷಾಂತ್ಯಕ್ಕೆ 12.94 ಕೋಟಿ ರೂ. ಠೇವಣಿ ಹೊಂದಿದೆ. ಸುಮಾರು 14.65 ಕೋಟಿ ರೂ.ಗಳಷ್ಟು ಸಂಘದ ಸದಸ್ಯರುಗಳಿಗೆ ದೀರ್ಘಾವಧಿ ಸಾಲವನ್ನು ಮಂಜೂರು ಮಾಡಲಾಗಿರುತ್ತದೆ. ಸಂಘದ ಒಟ್ಟು ವ್ಯವಹಾರವು 33.81 ಕೋಟಿ ರೂ. ಆಗಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಹಕಾರಿ ಸಂಘವು 60 ವರ್ಷವನ್ನು ಪೂರ್ಣಗೊಳಿಸಿರುವ ಪ್ರಯುಕ್ತ ‘ವಜ್ರ ಮಹೋತ್ಸವ’ವನ್ನು ಆಚರಿಸಲಾಯಿತು.
ಮಹಾಸಭೆಯಲ್ಲಿ ಶಾಂತಾನಂದ ಶೆಟ್ಟಿ, ಪುತ್ತು ಜೆ., ಪರಮೇಶ್ವರ ಹೆಗಡೆ, ಕರುಣಾಕರ ಶೆಟ್ಟಿ, ಲೋಕೇಶ ಪೂಜಾರಿ, ಆಶಾ, ಜಾನ್ ಬ್ಯಾಪಿಸ್ಟ್ ಡಿ’ಸೋಜ್, ರಾಜೇಶ ಬಿ., ವನಿತಾ, ಪ್ರಭಾತ್ ಜೋಶಿ, ಸಿದ್ದರಾಜು, ಷಣ್ಮುಗಪ್ಪ ಬಾವಿ, ಕಿಟ್ಟಣ್ಣ ಶೆಟ್ಟಿ, ಸದಾಶಿವ ಕೆ. ಹಾಗೂ ಶಿವರಾಜ್ ಎಮ್., ಸಿಬ್ಬಂದಿ ವರ್ಗ ಹಾಗೂ ಸಹಕಾರಿ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್ವರ ಹೆಗಡೆ ಇವರು ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಸಹಕಾರಿ ಸಂಘದ ಸದಸ್ಯರಾದ ಕರಿಬಸಪ್ಪ ಕಾರ್ಯಕ್ರಮ ನಿರೂಪಿಸಿದರು. ಜಾನ್ ಬ್ಯಾಪ್ಟಿಸ್ಟ್ ಡಿ’ಸೋಜ್ ಸ್ವಾಗತಿಸಿ, ಷಣ್ಮುಗಪ್ಪ ಬಾವಿ ವಂದಿಸಿದರು.