ರ‍್ಯಾಗಿಂಗ್: 9 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ
ಮಂಗಳೂರು: ನಗರದ ಪಾಂಡೇಶ್ವರದಲ್ಲಿರುವ ಖಾಸಗಿ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳ ಮೇಲೆ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತ ವಿದ್ಯಾರ್ಥಿಯು ನೀಡಿದ ದೂರಿನಂತೆ ಒಂಭತ್ತು ಮಂದಿ ಹಿರಿಯ ವಿದ್ಯಾರ್ಥಿಗಳ ಮೇಲೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲೇಜಿನ ಬಿಬಿಎ ಪೋರ್ಟ್ ಶಿಪ್ಪಿಂಗ್ ಲಾಜೆಸ್ಟಿಕ್ ಪ್ರಥಮ ವರ್ಷದ 19ರ ಹರೆಯದ ಇಬ್ಬರು ವಿದ್ಯಾರ್ಥಿಗಳು ಆ.19ರಂದು ಅಪರಾಹ್ನ 3:19ಕ್ಕೆ ಕಾಲೇಜಿನ ಹೊರಗಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿರಿಯ ವಿದ್ಯಾರ್ಥಿಗಳಾದ ನಾಸಿದ್ ಅಮೀರ್, ಆದಿಲ್ ಎಂ., ಅರ್ಶಕ್, ಅನೀಶ್, ಉವೈಸ್, ರೋಹನ್ ರಮೇಶ್, ಆದಿಲ್ ವಿ.ಪಿ., ರೆಹಾನ್ ಎಂ., ಸಿನಾನ್ ಎಂಬವರು ಸೇರಿ ಬೈಕ್‌ನಲ್ಲಿ ಅಪಹರಿಸಿ ಮನೆಯೊಂದರ ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ. ಹೊಡೆತದಿಂದ ಸುಸ್ತಾಗಿ ನೀರು ಕೇಳಿದಾಗ ಕಲುಷಿತ ನೀರು ಕೊಟ್ಟಿದ್ದು, ಕುಡಿಯದಿದ್ದಾಗ ಮೈಗೆ ಚೆಲ್ಲಿದ್ದಾರೆ. ಅಲ್ಲದೆ ಕ್ಲೀನ್ ಶೇವ್ ಮಾಡಿ ಕಾಲೇಜಿಗೆ ಬರಬೇಕು. ಶೂ ಧರಿಸಿ ಬರಬಾರದು ಎಂದು ಒತ್ತಾಯಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.