ನರೇಂದ್ರ ಮೋದಿ ವಿಕಾಸ ಪುರುಷನಲ್ಲ ದೇಶದ ಅಭಿವೃದ್ಧಿಯ ವಿನಾಶ ಪುರುಷ: ದೀಪ್ಸಿತಾ ಧರ್ ವಾಗ್ದಾಳಿ
"ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಜನ್ಮದಿನಕ್ಕೆ ಬಿಜೆಪಿಗರು ಅಲ್ಲಲ್ಲಿ ದೀಪ ಬೆಳಗಿಸಿದರು. ಆದರೆ ಅದೇ ಭಾರತದಲ್ಲಿ ಲಕ್ಷಾಂತರ ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ. ಹೀಗಿರುವಾಗ ನೀವು ಯಾವ ದೇಶಪ್ರೇಮದ ಬಗ್ಗೆ ಮಾತನಾಡುತ್ತಿದ್ದೀರಿ? ಎಲ್ಲರಿಗೂ ಶಿಕ್ಷಣ ಸಿಗುತ್ತಿದೆಯೇ ಎಂಬ ಆಲೋಚನೆ ನಿಮ್ಮಲ್ಲಿ ಎಂದಾದರೂ ಬಂದಿದ್ದೇಯಾ" ಎಂದರು.
"ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ಗೂ ಈ ಸಂದರ್ಭದಲ್ಲಿ ಪ್ರಶ್ನೆ ಕೇಳಬೇಕಾಗುತ್ತದೆ. ನೀವು ಆರ್‌ಎಸ್‌ಎಸ್ ಸಿದ್ಧಾಂತವನ್ನು, ಜಾತಿವಾದಿ ನೀತಿಯ ವಿರುದ್ಧವಾಗಿ ನೀವು ಧ್ವನಿ ಎತ್ತುತ್ತೀರಾ? ಮಂಗಳೂರಿನಲ್ಲಿ ಸಚಿವ ಸಂಪುಟ ನಡೆಯುವುದಕ್ಕೂ ಮುನ್ನ ನಮ್ಮ ಸಂಗಾತಿಗಳು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟಿಸಿದರು, ಮನವಿ ಪತ್ರ ನೀಡಲು ಮುಂದಾದರು. ಈ ಕಾಂಗ್ರೆಸ್ ಸರ್ಕಾರ ನಮ್ಮ ಸಂಗಾತಿಗಳನ್ನು ಬಂಧಿಸಿದೆ. ಆದರೆ ಈವರೆಗೆ ಯಾವುದೇ ಜೈಲು ಶಿಕ್ಷೆಯು ನಮ್ಮ ಹೋರಾಟವನ್ನು ತಡೆಯಲು ಸಾಧ್ಯವಾಗಿಲ್ಲ ಎಂಬುದನ್ನು ಈ ದೇಶದ ಯುವ-ವಿದ್ಯಾರ್ಥಿ ಹೋರಾಟಗಾರರು ಸಾಬೀತುಪಡಿಸುತ್ತಲೇ ಬಂದಿದ್ದಾರೆ. ಮುಂದೆಯೂ ನಮ್ಮನ್ನು ತಡೆಯಲು ಸಾಧ್ಯವಾಗಲ್ಲ" ಎಂದರು.
ಹಾಗೆಯೇ ಇತ್ತೀಚೆಗೆ ಅಪಘಾತಕ್ಕೆ ಒಳಗಾಗಿ ಮೆದುಳು ನಿಷ್ಕ್ರೀಯವಾದ ಬಳಿಕ ಕಿಡ್ನಿ, ಶ್ವಾಸಕೋಶ ಮೊದಲಾದ ಅಂಗಾಗಗಳನ್ನು ದಾನ ಮಾಡಿದ ಡಿವೈಎಫ್‌ಐ ಮುಖಂಡ ವರ್ಷಿತ್ ಕುತ್ತಾರ್ ಕುಟುಂಬವನ್ನೂ ದೀಪ್ಸಿತಾ ನೆನಪಿಸಿಕೊಂಡರು. "ಇಲ್ಲಿಗೆ ಬಂದ ಕೂಡಲೇ ನಾನು ವರ್ಷಿತ್ ಕುತ್ತಾರ್ ಮನೆಗೆ ಭೇಟಿ ನೀಡಿದೆ. ಅವರ ಊರಿನವರು, ಸ್ನೇಹಿತರು ಎಲ್ಲರೂ ವರ್ಷಿತ್ ಹಲವಾರು ಮಂದಿಗೆ ಸಹಾಯ ಮಾಡುತ್ತಿದ್ದರು ಎಂದು ಹೇಳಿದರು. ಇದು ನಮ್ಮ ಡಿವೈಎಫ್‌ಐ ಸಂಗಾತಿಗಳ ಗುಣ" ಎಂದರು.
"ನಮ್ಮದು ಸೌಹಾರ್ಧ, ವೈವಿಧ್ಯ ಸಂಸ್ಕೃತಿ. ಆದರೆ ಆರ್‌ಎಸ್‌ಎಸ್ ಬಿಜೆಪಿ ಈ ಸಂಸ್ಕೃತಿ ಮೇಲೆ ದಾಳಿ ಮಾಡುತ್ತಿದೆ. ಇಲ್ಲಿನ ಕಲೆ ಯಕ್ಷಗಾನವನ್ನೂ ಆರ್‌ಎಸ್‌ಎಸ್ ಸಿದ್ಧಾಂತ ಪ್ರಚಾರಕ್ಕಾಗಿ ಬಳಸಲಾಗುತ್ತಿದೆ" ಎಂದು ದೂರಿದ ದೀಪ್ಸಿತಾ, "ನಾವು ಭಗತ್ ಸಿಂಗ್, ರಾಜ್‌ಗುರು, ಸುಖ್‌ದೇವ್, ಸಾವಿತ್ರಿಬಾಯಿ ಫುಲೆ, ನಾರಾಯಣ ಗುರು ವಿಚಾರಧಾರೆಗಳನ್ನು ಹೊತ್ತು ಮುಂದೆ ಸಾಗುವವರು. ನಮ್ಮನ್ನು ಎಂದಿಗೂ ಒಡೆಯಲು ಸಾಧ್ಯವಿಲ್ಲ. ಮನುಷ್ಯತ್ವ ಮೊದಲು ಅದಕ್ಕಿಂತ ದೊಡ್ಡ ಧರ್ಮವಿಲ್ಲ. ಹಲವು ವರ್ಷಗಳ ಹಿಂದೆ ಕೇರಳ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದಕ್ಷಿಣ ಕನ್ನಡಕ್ಕೆ ಭೇಟಿ ನೀಡಲು ಮುಂದಾದಾಗ ಬಿಜೆಪಿಗರು ತಡೆದರು. ಆದರೆ ನಾವು ಸಾವಿರಾರು ಮಂದಿ ಸೇರಿ ಬೃಹತ್ ಕಾರ್ಯಕ್ರಮ ನಡೆಸಿದೆವು. ಭಗತ್ ಸಿಂಗ್ ಎಂದಿಗೂ ತಲೆಬಾಗಿಸಿಲ್ಲ, ನಾವೂ ಹಾಗೆಯೇ ಎಂದಿಗೂ ತಲೆಬಾಗಿಸಲ್ಲ. ನಮ್ಮ ಹೋರಾಟ ಮುಂದುವರೆಯುತ್ತದೆ. ನಾವು ಹೂವಿನಂತೆ, ನಮ್ಮನ್ನು ಕೀಳಿದಷ್ಟು ನಾವು ಚಿಗುರುತ್ತೇವೆ, ಹೋವಾಗಿ ನಿಮ್ಮ ಮುಂದೆ ನಿಲ್ಲುತ್ತೇವೆ" ಎಂದರು.
ಈ ಸಂದರ್ಭದಲ್ಲೇ ಮಾತನಾಡಿದ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, "ಇಂದು ದೇಶದಲ್ಲಿ ಅಲ್ಲಲ್ಲಿ ಶಿಕ್ಷಣ ಸಂಸ್ಥೆಗಳೆಲ್ಲವೂ ಮಾರಾಟವಾಗಿದೆ. ಸರ್ಕಾರಿ ಶಾಲೆಗಳಲ್ಲೂ ಹೊರಗುತ್ತಿಗೆ ಪದ್ಧತಿ ಇದೆ. ಅತಿಥಿ ಶಿಕ್ಷಕರನ್ನು ಮಾತ್ರ ನೇಮಿಸಲಾಗುತ್ತಿದೆ. ಶಿಕ್ಷಣ ವ್ಯವಸ್ಥೆಯ ಮೇಲೆ ದಾಳಿ ನಡೆಯುತ್ತಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
"ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದರು. ಅದರ ಲೆಕ್ಕದಂತೆ 21 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ ಈವರೆಗೆ ಉದ್ಯೋಗ ಸೃಷ್ಟಿಯಾಗಿಲ್ಲ. ಇನ್ನೊಂದೆಡೆ ಖಾಲಿ ಇರುವ ಎರಡು ಲಕ್ಷ ಹುದ್ದೆಯನ್ನು ಭರ್ತಿ ಮಾಡಲೂ ಈ ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲಾಗುತ್ತಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ಎಷ್ಟು ಮಂದಿಗೆ ತರಬೇತಿ ನೀಡಿದ್ದಾರೆ? ಎಷ್ಟು ಮಂದಿಗೆ ಉದ್ಯೋಗ ನೀಡಿದ್ದಾರೆ. ಇದಕ್ಕೆ ಉತ್ತರವಿಲ್ಲ" ಎಂದರು.
"2024ರಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ನೀಡುವ ನೀತಿಯನ್ನು ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟ ಅನುಮೋದನೆ ಮಾಡಿತು. ಆದರೆ ಅದಾದ ಮರುದಿನವೇ ಉದ್ಯಮಿಗಳ ಒತ್ತಡಕ್ಕೆ ಮಣಿದು ಈ ನೀತಿಯನ್ನು ವಾಪಸ್ ತೆಗೆದುಕೊಂಡರು. ಅಹಿಂದ ಎನಿಸಿಕೊಂಡಿರುವ ಸಿದ್ಧರಾಮಯ್ಯ ಅವರೇ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ನೀಡಿಲ್ಲ. ಇನ್ನು ಡಿ ಕೆ ಶಿವಕುಮಾರ್ ನೀಡುತ್ತಾರಾ? ಡಿಕೆಶಿಗೂ ನರೇಂದ್ರ ಮೋದಿಗೂ ಯಾವುದೇ ವ್ಯತ್ಯಾಸವಿಲ್ಲ. ಇಬ್ಬರ ಆರ್ಥಿಕ ನೀತಿಯೂ ಒಂದೇ" ಎಂದು ಆರೋಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವೈಎಫ್‌ಐ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಬಿ.ಕೆ. ಇಮ್ತಿಯಾಜ್ ಮಾತನಾಡಿ, "ಇತ್ತೀಚೆಗೆ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ತುಳು ಭಾಷೆಗೆ ಎರಡನೇ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡಲಾಗಿದೆ. ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಇಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಬರುವಾಗ ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಬಿಟ್ಟಿಲ್ಲ. ಬಂದರಿನಲ್ಲಿ ಮೀನು ಮಾರಾಟಗಾರರಿಗೆ, ಕಾರ್ಮಿಕರಿಗೆ ಕೆಲಸ ಮಾಡಲು ಬಿಟ್ಟಿಲ್ಲ. ಡಿಕೆಶಿ ವಿವಿಐಪಿ, ಅವರಿಗೆ ಮೀನು ಮಾರುವ ಕಾರ್ಮಿಕರ ವಾಸನೆ ಬರಬಾರದು ಎಂಬ ಕಾರಣಕ್ಕೆ ಅವರ ಎದುರು ಯಾರೂ ಕಾರ್ಮಿಕರು ಬರಬಾರದು ಎಂಬ ಅಘೋಷಿತ ತೀರ್ಮಾನವನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ತೆಗೆದುಕೊಂಡಿತು. ಒಂದು ವೇಳೆ ಈ ಕಾರ್ಮಿಕರು ದುಡಿಯದಿದ್ದರೆ ಇಡೀ ಮಂಗಳೂರು ದುರ್ನಾತ ಹೊಡೆಯುತ್ತದೆ" ಎಂದರು.
"ತುಳು ಭಾಷೆಗೆ ಮಾನ್ಯತೆ ಸಿಕ್ಕಿದೆ. ಆದರೆ ಇಲ್ಲಿನ ತುಳು ತಾಯ ಮಕ್ಕಳಿಗೆ ಇಲ್ಲಿಯೇ ಉದ್ಯೋಗ ಸಿಕ್ಕಿದೆಯೇ? ಈಗ ಎಲ್ಲಿ ಹೋದರೂ ಇಂಗ್ಲೀಷ್, ಹಿಂದಿ ಮಾತ್ರ ಮಾತನಾಡುವವರು ಇರುತ್ತಾರೆ. ಯಾವ ಕಚೇರಿಯಲ್ಲೂ ತುಳುನಾಡಿನ ಮಕ್ಕಳಿಗೆ ಉದ್ಯೋಗವಿಲ್ಲ. ತುಳು ಭಾಷೆಗೆ ನಿಜವಾಗಿಯೂ ನ್ಯಾಯ ನೀಡುವುದೆಂದರೆ ತುಳು ಮಕ್ಕಳಿಗೆ ಉದ್ಯೋಗ ನೀಡುವುದು. ಅವರು ಇಲ್ಲೇ ತಮ್ಮ ಪೋಷಕರೊಂದಿಗೆ ಇದ್ದು ದುಡಿಯುವಂತೆ ಮಾಡುವುದು. ಈ ಸವಾಲನ್ನು ಮುಂದಿಟ್ಟು ಡಿವೈಎಫ್‌ಐ ಸಾಗುತ್ತಿದೆ" ಎಂದರು.
"ಇಂದು ಜಯದೇವ, ಕಿದ್ವಾಯಿ ಆಸ್ಪತ್ರೆಯ ಘಟಕೆ ಸ್ಥಾಪನೆಗೆ ಸರ್ಕಾರ ಒಪ್ಪಿರುವುದು ಡಿವೈಎಫ್‌ಐ ಹೋರಾಟದ ಫಲ. ಈ ಪ್ರಕ್ರಿಯೆಯನ್ನು ಶೀಘ್ರ ಮುಕ್ತಾಯಗೊಳಿಸಬೇಕು. ಶೀಘ್ರ ಕಾರ್ಯ ಆರಂಭವಾಗಬೇಕು" ಎಂದು ಆಗ್ರಹಿಸಿದರು.
ವೇದಿಕೆಯಲ್ಲಿ ಡಿವೈಎಫ್‌ಐ ಜಿಲ್ಲಾ ನಾಯಕಿ ಮಾಧುರಿ ಬೋಳಾರ್, ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ನಾಯಕರಾದ ವಿನಾಯಕ್ ಮಂಗಳೂರು, ಅಝ್ಲಾನ್ ಬೆಂಗ್ರೆ ಉಪಸ್ಥಿತರಿದ್ದರು. ಡಿವೈಎಫ್‌ಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಸ್ವಾಗತಿಸಿದರು. ಡಿವೈಎಫ್‌ಐ ಮಂಗಳೂರು ನಗರ ಕಾರ್ಯದರ್ಶಿ ತೈಯೂಬ್ ಬೆಂಗ್ರೆ ವಂದಿಸಿ, ಡಿವೈಎಫ್‌ಐ ದಕ್ಷಿಣ ಕನ್ನಡ ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು ಕಾರ್ಯಕ್ರಮ ನಿರ್ವಹಿಸಿದರು.



