ನೇತ್ರದಾನದ ಮಹತ್ವವನ್ನು ಪ್ರತಿಯೊಂದು ಮನೆಗೂ ತಲುಪಿಸುವ ಸಂಕಲ್ಪ: ಸಚಿವ ಯು.ಟಿ. ಖಾದರ್
ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ನೇತ್ರದಾನ ಜಾಗೃತಿ ರ್ಯಾಲಿಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ನೇತ್ರದಾನವು ಮತ್ತೊಬ್ಬರ ಬದುಕಿಗೆ ಬೆಳಕು ನೀಡುವ ಮಹತ್ತರ ಮಾನವೀಯ ಕಾರ್ಯವಾಗಿದೆ. ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿಯೂ ನೇತ್ರ ಬ್ಯಾಂಕ್‌ಗಳನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಅಂಗದಾನವೂ ಅತ್ಯಂತ ಮಹತ್ವದ ಮಾನವೀಯ ಸೇವೆಯಾಗಿದೆ. ವ್ಯಕ್ತಿಯೊಬ್ಬರು ತಮ್ಮ ಮರಣಾನಂತರ ದೇಹದ ಯಾವುದೇ ಅಂಗವನ್ನು ದಾನ ಮಾಡಲು ಮುಂದೆ ಬಂದರೆ, ಅಂತಹ ದಾನಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಸೂಕ್ತ ಪ್ರೋತ್ಸಾಹಧನ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ವಿದ್ಯಾರ್ಥಿಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಜೊತೆಗೆ ಇತರ ಭಾಷೆಗಳನ್ನು ಕಲಿಯುವುದರಿಂದ ಅವರ ಜ್ಞಾನ ವಿಸ್ತಾರವಾಗುವುದಲ್ಲದೆ, ಮುಂದಿನ ದಿನಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಪಡೆಯಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ದೃಷ್ಟಿ ನೀತಿ ಸಮಿತಿಯ ಅಧ್ಯಕ್ಷ ರಾದ ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲೂರು ಮಾತನಾಡಿ, ನೇತ್ರದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ರ್ಯಾಲಿಯನ್ನು ಆಯೋಜಿಸಲಾಗಿದೆ ಎಂದರು. “ನೇತ್ರದಾನ ಮಹಾದಾನ” ಎಂಬ ಸಂದೇಶವನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀಮತಿ ರಶ್ಮಿ ಕೃಷ್ಣ ಪ್ರಸಾದ್, ನಿರ್ದೇಶಕರಾದ ಡಾಕ್ಟರ್ ವಿಕ್ರಮ್ ಜೈನ್, ಡಾಕ್ಟರ್ ಹರೀಶ್ ಶೆಟ್ಟಿ, ಜಾಕೋಬ್ ಚಾಕೋ, ತೇಜಸ್ವಿನಿ ಶೆಟ್ಟಿ ಉಪಸ್ಥಿತರಿದ್ದರು. ಮೊದಲಿಗೆ ನೂತನ ಪ್ರಾರ್ಥಿಸಿ, ನಿಶಾ ಸ್ವಾಗತಿಸಿದರು, ಲಕ್ಷಿತ ವಂದಿಸಿದರು. ಮಾಧವ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.