ಕಿರು ಸೇತುವೆ ಕುಸಿತ: ಸಂಚಾರ ನಿರ್ಬಂಧ
Wednesday, September 2, 2026
ಮಂಗಳೂರು: ಮಂಗಳೂರು-ಕಟೀಲು ಮುಖ್ಯರಸ್ತೆಯ ಕರಂಬಾರು ಬಳಿ ಮಳೆ ನೀರು ಹರಿದುಹೋಗಲು ನಿರ್ಮಿಸಲಾಗಿದ್ದ ಕಿರುಸೇತುವೆಯ ಒಂದು ಭಾಗ ಕುಸಿದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಕಟೀಲು ಕಡೆಯಿಂದ ಮಂಗಳೂರು ಕಡೆಗೆ ಬರುವ ರಸ್ತೆಯ ಭಾಗದಲ್ಲಿರುವ ಕಿರುಸೇತುವೆ ಕುಸಿದಿರುವುದನ್ನು ವಾಹನ ಸವಾರರು ಗಮನಿಸಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸೇತುವೆ ಕುಸಿತದ ಬಗ್ಗೆ ಸಾರ್ವಜನಿಕರು ಬಜ್ಪೆ ಪೊಲೀಸರ ಗಮನಕ್ಕೂ ತಂದಿದ್ದು, ಪೊಲೀಸರು ಪಿಡಬ್ಲ್ಯೂಡಿ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ತೆರಳಿದ ಬಜ್ಪೆ ಪೊಲೀಸರು ಸಾರ್ವಜನಿಕರ ಸಹಕಾರದೊಂದಿಗೆ ರಸ್ತೆಯನ್ನು ಬಂದ್ ಮಾಡಿದ್ದಾರೆ. ಇದರಿಂದಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತೆರಳುವ ವಾಹನಗಳು ಸೇರಿದಂತೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿದೆ.