ಮಂಗಳೂರಿನಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ ಹಾಗೂ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಎಸ್‌ಡಿಪಿಐ ನಾಯಕರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಲು ವಿಶ್ವ ಹಿಂದೂ ಪರಿಷದ್ ಆಗ್ರಹ
ಮಂಗಳೂರು: ಇಂದು ನಗರದಲ್ಲಿ ರಾಜ್ಯ ಸರ್ಕಾರಿ ಸಚಿವ ಸಂಪುಟ ಸಭೆ ನಡೆದ ಹಿನ್ನೆಲೆಯಲ್ಲಿ, ನಗರದ ಕ್ಲಾಕ್ ಟವರ್ ಬಳಿ ಯಾವುದೇ ಪೂರ್ವಾಪರ ಅನುಮತಿ ಪಡೆಯದೇ ಎಸ್‌ಡಿಪಿಐ ಸಂಘಟನೆಯ ನಾಯಕರು ಮತ್ತು ಕಾರ್ಯಕರ್ತರು ಕಾನೂನುಬಾಹಿರವಾಗಿ ಪ್ರತಿಭಟನೆ ನಡೆಸಿ ಸಾರ್ವಜನಿಕ ಶಾಂತಿಗೆ ಭಂಗ ತರಲು ಯತ್ನಿಸಿರುವುದನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ.
ಪ್ರತಿಭಟನೆಯ ನೆಪದಲ್ಲಿ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಅಧಿಕೃತ ಕರ್ತವ್ಯಕ್ಕೆ ಅಡ್ಡಿಪಡಿಸಿ, ನಗರದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಲು ಸಂಚು ರೂಪಿಸಲಾಗಿದೆ. ಅಲ್ಲದೆ, ನಿಯಮ ಉಲ್ಲಂಘಿಸಿದ ಇವರನ್ನು ವಶಕ್ಕೆ ಪಡೆದು ಪಣಂಬೂರು ಪೊಲೀಸ್ ಠಾಣೆಯಲ್ಲಿ ಇರಿಸಿದಾಗ, ಪೊಲೀಸ್ ಠಾಣೆಯ ಒಳಗಡೆಯೂ ಯಾವುದೇ ಅನುಮತಿ ಇಲ್ಲದೆ ಫೇಸ್ ಬುಕ್ ಜಾಲತಾಣದಲ್ಲಿ ನೇರ ವಿಡಿಯೋ ಪ್ರಸಾರ (ಲೈವ್ ವಿಡಿಯೋ) ಮಾಡುವ ಮೂಲಕ ಕಾನೂನಿಗೆ ಸವಾಲು ಹಾಕಿದ್ದಾರೆ. ಪೊಲೀಸ್ ಠಾಣೆಯಂತಹ ಸೂಕ್ಷ್ಮ ಪ್ರದೇಶದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ವ್ಯವಹರಿಸಿರುವುದು ಇವರ ಬೇಜವಾಬ್ದಾರಿತನ ಮತ್ತು ಕಾನೂನುಬಾಹಿರ ಮನಸ್ಥಿತಿಯನ್ನು ತೋರಿಸುತ್ತದೆ.
ಆದ್ದರಿಂದ, ಮಂಗಳೂರು ನಗರದಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಕದಡಲು ಯತ್ನಿಸಿದ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಎಸ್‌ಡಿಪಿಐ ಮುಖಂಡ ರಿಯಾಜ್ ಕಡಂಬು ಸೇರಿದಂತೆ ಭಾಗಿಯಾದ ಎಲ್ಲಾ ಕಾರ್ಯಕರ್ತರ ಮೇಲೆ ಮಂಗಳೂರು ನಗರ ಪೊಲೀಸ್ ಆಯುಕ್ತರು ತಕ್ಷಣವೇ ಸ್ವಯಂಪ್ರೇರಿತ ದೂರು (ಸುಮೋಟೋ ಕೇಸ್) ದಾಖಲಿಸಿಕೊಂಡು, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿಶ್ವ ಹಿಂದೂ ಪರಿಷತ್ ಆಗ್ರಹಿಸುತ್ತದೆ.