ಮಂಗಳೂರು ಸಚಿವ ಸಂಪುಟ ಸಭೆಯಲ್ಲಿ ತುಳುನಾಡಿನ ಸಂಸ್ಕೃತಿ, ಭದ್ರತೆ ಹಾಗೂ ಯುವಜನರ ಹಿತರಕ್ಷಣೆಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ವಿಶ್ವ ಹಿಂದೂ ಪರಿಷದ್ ಆಗ್ರಹ

ಮಂಗಳೂರು ಸಚಿವ ಸಂಪುಟ ಸಭೆಯಲ್ಲಿ ತುಳುನಾಡಿನ ಸಂಸ್ಕೃತಿ, ಭದ್ರತೆ ಹಾಗೂ ಯುವಜನರ ಹಿತರಕ್ಷಣೆಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ವಿಶ್ವ ಹಿಂದೂ ಪರಿಷದ್ ಆಗ್ರಹ

ಮಂಗಳೂರು: ಸೆಪ್ಟೆಂಬರ್ 18 ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸರ್ಕಾರದ ಪೂರ್ಣ ಪ್ರಮಾಣದ ಸಚಿವ ಸಂಪುಟ ಸಭೆಯಲ್ಲಿ ಕರಾವಳಿಯ ಅಭಿವೃದ್ಧಿಗೆ ವಿಶೇಷ ಪ್ರವಾಸೋದ್ಯಮ ಪ್ಯಾಕೇಜ್ ಹಾಗೂ ಐಟಿ-ಬಿಟಿ ಉದ್ಯಮಗಳ ಉತ್ತೇಜನಕ್ಕೆ ಚರ್ಚಿಸುತ್ತಿರುವುದನ್ನು ವಿಶ್ವ ಹಿಂದೂ ಪರಿಷತ್ ಸಾಮಾಜಿಕ ಹೊಣೆಗಾರಿಕೆಯಿಂದ ಸ್ವಾಗತಿಸುತ್ತದೆ. ಆರ್ಥಿಕ ಪ್ರಗತಿ ಮತ್ತು ಸ್ಥಳೀಯ ಯುವಕರ ಉದ್ಯೋಗ ಸೃಷ್ಟಿ ಅತ್ಯಗತ್ಯ. ಆದರೆ, ಈ ಅಭಿವೃದ್ಧಿ ನೀತಿಗಳನ್ನು ಜಾರಿಗೊಳಿಸುವಾಗ ತುಳುನಾಡಿನ ಮೂಲ ಸಂಸ್ಕೃತಿ, ಧಾರ್ಮಿಕ ಆಚರಣೆ, ರಾಷ್ಟ್ರೀಯ ಭದ್ರತೆ ಹಾಗೂ ಸ್ಥಳೀಯರ ಹಿತಾಸಕ್ತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ವಿಶ್ವ ಹಿಂದೂ ಪರಿಷದ್  ಪ್ರಾಂತ ಸಹ  ಕಾರ್ಯದರ್ಶಿ ಶರಣ್ ಪಂಪುವೆಲ್ ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಈಗಾಗಲೇ  ಮನವಿಯ ಸಲ್ಲಿಸಲಾಗಿದ್ದು, ಮನವಿಯಲ್ಲಿ ವಿಶ್ವ ಹಿಂದೂ ಪರಿಷದ್ ಬೇಡಿಕೆಗಳನ್ನು ಮಾನ್ಯ ಮುಖ್ಯಮತ್ರಿಗಳಿಗೆ ಸಲ್ಲಿಸಲಾಗಿದೆ.

1. ಧಾರ್ಮಿಕ-ಸಾಂಸ್ಕೃತಿಕ ಆಚರಣೆಗಳಿಗೆ ಮುಕ್ತ ಅವಕಾಶ ನೀಡಬೇಕು,  ಕರಾವಳಿಯ ಜೀವನಾಡಿಯಾಗಿರುವ ದೈವಾರಾಧನೆ, ಕೋಲ-ನೇಮ, ಕಂಬಳ, ಯಕ್ಷಗಾನ ಮತ್ತು ಸಾಂಪ್ರದಾಯಿಕ ನಾಟಕಗಳನ್ನು 'ವಿಶೇಷ ಸಾಂಸ್ಕೃತಿಕ ಪರಂಪರೆ' ಎಂದು ವರ್ಗೀಕರಿಸಬೇಕು. ಇಡೀ ರಾತ್ರಿ ನಡೆಯುವ ಈ ಆಚರಣೆಗಳಿಗೆ ಧ್ವನಿವರ್ಧಕ ನಿಯಮಗಳಿಂದ ವಿನಾಯಿತಿ ನೀಡಿ, ಆಯೋಜಕರಿಗೆ ಪೊಲೀಸ್ ಮತ್ತು ಸ್ಥಳೀಯ ಆಡಳಿತದಿಂದ ಸುಲಭವಾಗಿ ಅನುಮತಿ ಸಿಗುವಂತೆ ಸರಳೀಕೃತ ವ್ಯವಸ್ಥೆ ಮಾಡಬೇಕು.

2. ತುಳು ಭಾಷೆಗೆ ಅಧಿಕೃತ ಭಾಷಾ ಮಾನ್ಯತೆ: ೨೫೦೦ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ತುಳು ಭಾಷೆಯನ್ನು ಕರ್ನಾಟಕದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ತಕ್ಷಣವೇ ಘೋಷಿಸಬೇಕು ಮತ್ತು ಸಂವಿಧಾನದ ೮ನೇ ಅನುಸೂಚಿಗೆ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರಕ್ಕೆ ಬಲವಾದ ಶಿಫಾರಸು ಕಳುಹಿಸಬೇಕು.

3. ಸ್ಥಳೀಯರಿಗೆ ಉದ್ಯೋಗ ಮೀಸಲಾತಿಗೆ ಆದ್ಯತೆ ನೀಡಬೇಕು,  ತುಳುನಾಡು ಮತ್ತು ಕರಾವಳಿಯ ಪ್ರತಿಭಾವಂತ ಯುವಕರ ವಲಸೆ ತಡೆಯಲು ಐಟಿ-ಬಿಟಿ, ಬಂದರು ಆಧಾರಿತ ಉದ್ಯಮಗಳು ಹಾಗೂ ಪ್ರವಾಸೋದ್ಯಮ ಯೋಜನೆಗಳಲ್ಲಿ ಶೇ. ೭೦ ರಿಂದ ೮೦ ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ಕಾಯ್ದಿರಿಸಬೇಕು.

4. ಮಂಗಳೂರಿನಲ್ಲಿ ಶಾಶ್ವತ NIA ಘಟಕ: ಕರಾವಳಿಯ ಗಡಿ ಹಾಗೂ ಸಮುದ್ರ ತೀರದ ಸೂಕ್ಷ್ಮತೆಯನ್ನು ಪರಿಗಣಿಸಿ, ದೇಶವಿರೋಧಿ ಹಾಗೂ ಶಂಕಿತ ಉಗ್ರ ಚಟುವಟಿಕೆಗಳನ್ನು ತಡೆಯಲು ಮಂಗಳೂರಿನಲ್ಲಿ ಶಾಶ್ವತ ಎನ್ಐಎ ಕಚೇರಿ ಹಾಗೂ ವಿಶೇಷ ಕರಾವಳಿ ಭದ್ರತಾ ಪಡೆ ಸ್ಥಾಪಿಸಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು.

5. ಧಾರ್ಮಿಕ ಹಾಗೂ ಕೌಟುಂಬಿಕ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು,  ಗೋವಾ ಮಾದರಿಯ ಜೂಜು, ಕ್ಯಾಸಿನೋ, ನೈಟ್ಲೈಫ್ಗಳಿಗೆ ಅವಕಾಶ ನೀಡಬಾರದು. ಶೈಕ್ಷಣಿಕ ಕೇಂದ್ರವಾದ ಮಂಗಳೂರಿನಲ್ಲಿ ಯುವಜನತೆಯನ್ನು ಬಲಿ ಪಡೆಯುತ್ತಿರುವ ಮಾದಕ ದ್ರವ್ಯ ಜಾಲ ಹಾಗೂ ಪಬ್/ಕ್ಲಬ್ ಸಂಸ್ಕೃತಿಯ ದುರ್ಬಳಕೆಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.

6. ಅಕ್ರಮ ಕಸಾಯಿಖಾನೆ ಹಾಗೂ ಗೋಕಳ್ಳತನ ಸಂಪೂರ್ಣ ತಡೆ: ಗೋಹತ್ಯೆ ಪ್ರತಿಬಂಧಕ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಗಡಿ ಚೆಕ್ಪೋಸ್ಟ್ಗಳನ್ನು ಬಲಪಡಿಸಬೇಕು. ಅಕ್ರಮ ಗೋಸಾಗಾಟ ಮತ್ತು ಕಸಾಯಿಖಾನೆಗಳ ವಿರುದ್ಧ ತಕ್ಷಣವೇ ದಾಳಿ ನಡೆಸಿ ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. 

ತುಳುನಾಡಿನ ಮೂಲ ಸಂಸ್ಕೃತಿ, ಭದ್ರತೆ ಮತ್ತು ಯುವಜನರ ಭಾವಿ ಭವಿಷ್ಯವನ್ನು ಕಾಯುವ ನಿಟ್ಟಿನಲ್ಲಿ ಸಲ್ಲಿಸಿರುವ ಈ ಮನವಿಯನ್ನು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಂಪೂರ್ಣ ಸಚಿವ ಸಂಪುಟವು ಗಂಭೀರವಾಗಿ ಪರಿಗಣಿಸಿ, ಮುಂಬರುವ ಸಂಪುಟ ಸಭೆಯಲ್ಲಿ ಸೂಕ್ತ ನಿರ್ಧಾರ ತಳೆಯಬೇಕಾಗಿ ವಿಶ್ವ ಹಿಂದೂ ಪರಿಷತ್ ಆಗ್ರಹಿಸುತ್ತದೆ ಎಂದು ವಿಶ್ವ ಹಿಂದೂ ಪರಿಷದ್  ಪ್ರಾಂತ ಸಹ  ಕಾರ್ಯದರ್ಶಿ ಶರಣ್ ಪಂಪುವೆಲ್ ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article