ಮೀನುಗಾರಿಕಾ ಧಕ್ಕೆ: ಮೂರನೇ ಹಂತದ ಜೆಟ್ಟಿ ಕಾಮಗಾರಿ ಪೂರ್ಣಗೊಳಿಸಲ ಆಗ್ರಹ
ಮಂಗಳೂರಿನಲ್ಲಿ ಬುಧವಾರ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಈ ಮನವಿ ಮಾಡಿದ ಸಂಘದ ಮುಖಂಡರು, ಸಂಘದ ಹಲವಾರು ವರ್ಷಗಳ ಬೇಡಿಕೆ ಫಲವಾಗಿ 1 ಮತ್ತು 2ನೆ ಹಂತದ ಜೆಟ್ಟಿಗೆ 37.50 ಕೋಟಿ ರೂ. ಹಾಗೂ 3ನೆ ಹಂತದ ಕಾಮಗಾರಿಗೆ 49.50 ಕೋಟಿ ರೂ. ಅನುದಾನ ಸರಕಾರ ಮಂಜೂರು ಮಾಡಿದೆ. ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದರೂ ವೇಗ ಕುಂಠಿತವಾಗಿದೆ ಎಂದರು.
ಟ್ರಾಲ್‌ಬೋಟ್ ಸಂಘದ ಮುಖಂಡ ರಾಜೇಶ್ ಪುತ್ರನ್ ಮಾತನಾಡಿ, ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ದಿನನಿತ್ಯ ಅನೇಕ ಸಮಸ್ಯೆಗಳನ್ನು ಮೀನುಗಾರರು ಎದುರಿಸುವಂತಾಗಿದೆ. ಮೀನುಗಾರಿಕಾ ಚಟುವಟಿಕೆಗಳು ಹಾಗೂ ಬಂದರಿನ ಕಾರ್ಯ ನಿರ್ವಹಣೆಯ ಮೇಲೂ ಇದು ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದರು.
ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಈಗಾಗಲೇ ಸುಮಾರು 4,000 ಕ್ಕಿಂತಲೂ ಅಧಿಕ ಸಂಖ್ಯೆಯ ಮೀನುಗಾರಿಕಾ ಬೋಟುಗಳು ಕಾರ್ಯಾಚರಿಸುತ್ತಿದ್ದು, ಈಗಿರುವ ಮೀನುಗಾರಿಕಾ ಬಂದರಿನಲ್ಲಿ ಬೋಟುಗಳ ಮೀನು ಇಳಿಸಲು, ಐಸ್ ಹಾಗೂ ಬಲೆ ಸಾಮಾಗ್ರಿಗಳನ್ನು ತುಂಬಿಸಲು ಸ್ಥಳದ ಅನಾನುಕೂಲತೆ ವಿಪರೀತವಾಗಿ ಹೆಚ್ಚಾಗುತ್ತಿದೆ. ಆದುದರಿಂದ ಮಂಗಳೂರು ಮೀನುಗಾರಿಕಾ ಬಂದರಿನ ಭವಿಷ್ಯದ ಅಗತ್ಯತೆಗಳನ್ನು ಪರಿಗಣಿಸಿ ಸಮಗ್ರ ಅಭಿವೃದ್ಧಿ ಮತ್ತು ವಿಸ್ತರಣೆಗೆ ಸಂಬಂಧಿಸಿದಂತೆ ಸೂಕ್ತ ನೀಲಿ ನಕ್ಷೆ ತಯಾರಿಸಿ ಅಗತ್ಯ ಮೂಲ ಸೌಕರ್ಯಗಳನ್ನು ನಿರ್ಮಿಸುವ ಮೂಲಕ ಬಂದರಿನ ಸಮಗ್ರ ಅಭಿವೃದ್ಧಿ ಕಾರ್ಯವನ್ನು ಸರಕಾರವು ತುರ್ತಾಗಿ ಕೈಗೆತ್ತಿಕೊಳ್ಳಬೇಕು.
ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಹೂಳೆತ್ತುವ ಕೆಲಸ ನಡೆಯದೆ ಹಲವು ವರ್ಷಗಳು ಕಳೆದಿದೆ. ಇದರ ಪರಿಣಾಮವಾಗಿ ಬಂದರಿನ ವಿವಿಧ ಭಾಗಗಳಲ್ಲಿ ಹೂಳು ಸಂಗ್ರಹವಾಗಿ, ವಿಶೇಷವಾಗಿ ಅಳಿವೆಬಾಗಿಲು, ಕ್ರಿಕ್ ಪ್ರದೇಶ ಹಾಗೂ ಬೋಟುಗಳು ತಂಗುವ ಸ್ಥಳಗಳು ಬೋಟುಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಅಲ್ಲದೆ ಅಳಿವೆ ಬಾಗಿಲಿನಲ್ಲಿ ಹೂಳು ತುಂಬಿರುವುದರಿಂದ ಈಗಾಗಲೇ ಹಲವಾರು ಮೀನುಗಾರಿಕಾ ಬೋಟುಗಳು ಜಖಂಗೊಂಡಿರುತ್ತದೆ ಹಾಗೂ ಮೀನುಗಾರರ ಪ್ರಾಣಹಾನಿಯಾಗಿರುತ್ತದೆ. ಆದುದರಿಂದ ಆದ್ಯತೆಯಲ್ಲಿ ಕೂಡಲೇ ಹೂಳೆತ್ತುವ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು ಎಂದವರು ಆಗ್ರಹಿಸಿದರು.
ಮೀನುಗಾರಿಕಾ ಬಂದರಿನಲ್ಲಿ ಕಾರ್ಯಾಚರಿಸುತ್ತಿರುವ ಈಗಿನ ಬೋಟುಗಳ ಮೀನುಗಾರಿಕಾ ಚಟುವಟಿಕೆಗೆ ಸ್ಥಳಾವಕಾಶ ತುಂಬಾ ಕಡಿಮೆ ಇರುವುದರಿಂದ ಸುಮಾರು 800-1000 ಮೀ.ವರೆಗಿನ ಉದ್ದದ ಜೆಟ್ಟಿ ಅಗತ್ಯವಿದೆ. ೩ನೆ ಹಂತದ ಬಂದರಿನಿಂದ ಕೆಎಫ್‌ಡಿಸಿವರೆಗಿನ 250 ಮೀ. ಉದ್ದದ ನೇತ್ರಾವತಿ ತೀರವನ್ನು ಮೀನುಗಾರಿಕಾ ಬಂದರಾಗಿ ನಿರ್ಮಾಣ ಮಾಡುವ ಅಗತ್ಯವಿದೆ ಎಂದು ಮುಖಂಡರಾದ ಚೇತನ್ ಬೆಂಗ್ರೆ ನುಡಿದರು.
ರಂಖ ಮತ್ತು ಕಮಿಷನ್ ಮೀನು ಮಾರಾಟವನ್ನು ಬಂದರಿನ ಒಳಭಾಗದಲ್ಲಿ ನಡೆಸುತ್ತಿರುವುದರಿಂದ ಬೇರೆ ರಾಜ್ಯಗಳಿಂದ ಬರುವ 200ಕ್ಕೂ ಅಧಿಕ ವಾಹನಗಳಿಂದ ವಾಹನ ದಟ್ಟನೆ ಉಂಟಾಗುತ್ತಿದ್ದು, ಈ ಮಾರುಕಟ್ಟೆಯನ್ನು ಮೀನುಗಾರಿಕಾ ಕಾಲೇಜಿಗೆ ಸೇರಿರುವ 3 ಎಕರೆ ಜಾಗಕ್ಕೆ ಸ್ಥಳಾಂತರ ಮಾಡಿ ಹಾಲಿ ಬಂದರಿನ ದಟ್ಟನೆ ಕಡಿಮೆ ಮಾಡಬೇಕಿದೆ. ಈ ಬಗ್ಗೆ ಮುಖ್ಯಮಂತ್ರಿಯವರು ಸಚಿವ ಸಂಪುಟ ಸಭೆಯಲ್ಲಿ ಘೋಷಣೆ ಮಾಡಿರುವುದು ಸೇರಿದಂತೆ ಮೀನುಗಾರಿಕೆ ಹಲವು ಯೋಜನೆಗಳನ್ನು ನೀಡಿರುವುದು ಮೀನುಗಾರರಲ್ಲಿ ಅಭಿವೃದ್ಧಿಯ ನಿರೀಕ್ಷೆ ಮೂಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪರ್ಸೀನ್ ಮೀನುಗಾರರ ಸಂಘದ ಮುಖಂಡ ಮೋಹನ್ ಬೆಂಗ್ರೆ,ತ ಫೈಜಲ್ ಕುದ್ರೋಳಿ, ಸಲೀಂ ನರಿಂಗಾನ ಉಪಸ್ಥಿತರಿದ್ದರು.