ಭವಿಷ್ಯದ ಭಾರತ ನಿರ್ಮಾಣದಲ್ಲಿ, ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ, ಶಿಕ್ಷಕರ ಪಾತ್ರ ಮಹತ್ತರವಾದದ್ದು: ಲತಾಕಿಶೋರ್ ಕೆ. ಬಿಜೈ
ಭಾರತದ ಮಾಜಿ ರಾಷ್ಟ್ರಪತಿ, ಮಹಾನ್ ತತ್ವಜ್ಞಾನಿ, ಶಿಕ್ಷಣತಜ್ಞ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದಂದು ಶಿಕ್ಷಕರ ದಿನ ಆಚರಿಸಲಾಗುತ್ತದೆ. ಇವರು ಸೆಪ್ಟೆಂಬರ್ 5, 1888 ರಂದು ತಿರುತ್ತಣಿಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಂದೆ ಸರ್ವಪಲ್ಲಿ ವೀರಸ್ವಾಮಿ, ಒಬ್ಬ ಜಮೀನ್ದಾರರ ಬಳಿ ಕಂದಾಯ ಅಧಿಕಾರಿಯಾಗಿದ್ದರು, ತಾಯಿ ಸೀತಮ್ಮರವರ, ಆರು ಮಕ್ಕಳಲ್ಲಿ ಅವರು ನಾಲ್ಕನೇ ಮಗು. ತಂದೆಗೆ ಮಗ ಇಂಗ್ಲಿಷ್ ಕಲಿಯುವುದು ಇಷ್ಟವಿರಲಿಲ್ಲ, ಪೂಜಾರಿ ಆಗಬೇಕೆಂದು ಬಯಸಿದ್ದರು.
ಅವರು ಬಹಳ ಬುದ್ಧಿವಂತ ವಿದ್ಯಾರ್ಥಿ, ಬಹುತೇಕ ವಿದ್ಯಾಭ್ಯಾಸವನ್ನು ವಿದ್ಯಾರ್ಥಿವೇತನದ ಸಹಾಯದಿಂದಲೇ ಮುಗಿಸಿದರು. ಇದಕ್ಕೆ ಕಾರಣ ಕುಟುಂಬದ ಆರ್ಥಿಕ ಸಂಕಷ್ಟ. ಕಾಲೇಜು ಶಿಕ್ಷಣವನ್ನು ಸ್ವಲ್ಪ ಸಮಯ ವೆಲ್ಲೂರಿನ ಕಾಲೇಜಿನಲ್ಲಿ ಓದಿದರು. ನಂತರ 16ನೇ ವಯಸ್ಸಿನಲ್ಲಿ ಮದ್ರಾಸ್ ಕ್ರಿಶ್ಚಿಯನ್ ಕಾಲೇಜು ಸೇರಿದರು. ಅವರ ಸೋದರ ಸಂಬಂಧಿಯೊಬ್ಬರು ತಮ್ಮ ಫಿಲಾಸಫಿಕಲ್ ಪುಸ್ತಕಗಳನ್ನು ಅವರಿಗೆ ಕೊಟ್ಟಿದ್ದರಿಂದ ಅವರು ತತ್ವಶಾಸ್ತ್ರವನ್ನು ಆಯ್ಕೆ ಮಾಡಿಕೊಂಡರು. 20ನೇ ವಯಸ್ಸಿನಲ್ಲೇ B.A ಮತ್ತು M.A ಪದವಿಯನ್ನು ತತ್ವಶಾಸ್ತ್ರದಲ್ಲಿ ಮುಗಿಸಿದರು.
ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ, ನಂತರ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲೂ ಬೋಧನೆ ಮಾಡಿದರು. 1962 ರಲ್ಲಿ ಭಾರತದ ಮೊದಲ ಉಪ-ರಾಷ್ಟ್ರಪತಿಯಾಗಿ ಹಾಗೂ 1962 ರಿಂದ 1972 ರ ವರೆಗೆ ಭಾರತದ ಎರಡನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ಮಾಹಿತಿ ನೀಡಿದ ಅವರಿಗೆ ಘಟಕದ ಪರವಾಗಿ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕಿ ಸವಿತಾ ಕೋಟ್ಯಾನ್ ಗೌರವ ಸಲ್ಲಿಸಿದರು.
ಗುರು ಸಂದೇಶವನ್ನು ಘಟಕದ ಪ್ರವಾಸ ಸಹ ಸಂಚಾಲಕ ಸತೀಶ್ ಜಿ.ಪಿ. ವಾಚಿಸಿದರು.
ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷರುಗಳು ಪದಾಧಿಕಾರಿಗಳು ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ಸ್ವಾಗತಿಸಿದರು, ಕಾರ್ಯದರ್ಶಿ ಉಷಾ ವರದಿ ಓದಿದರು, ಉಪಾಧ್ಯಕ್ಷ ಯತೀಶ್ ಬಳಂಜ ವಂದಿಸಿದರು.

