ಪಾಳುಬಿದ್ದಿದ್ದ ಪಣಂಬೂರಿನ ಕುದ್ರೆಮುಖ ಬಸ್ ತಂಗುದಾಣಕ್ಕೆ ಸಿಕ್ತು ಕಾಯಕಲ್ಪ!
ಸುಮಾರು ಮೂರು ಗಂಟೆಗಳ ಕಾಲ ಸತತವಾಗಿ ನಡೆದ ಈ ಸ್ವಚ್ಛತಾ ಅಭಿಯಾನದಲ್ಲಿ ಮೀಡಿಯಾ ಮನಸುಗಳು ತಂಡದ ಪ್ರಮುಖರಾದ ಶಶಿ ಬೆಳ್ಳಾಯರು, ಶಿವು ಕುಲಾಲ್, ಚಿತ್ರಾ ಪ್ರೀತಂ ಹಾಗೂ ಗಿರೀಶ್ ಮಣೇಲ್ ಅವರು ಶ್ರಮಿಸಿದರು. ಕಸ ತೆಗೆದು, ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ ಬಸ್ ನಿಲ್ದಾಣವನ್ನು ತೊಳೆದು ಹೊಸ ಕಳೆಯನ್ನು ತಂದಿತ್ತರು. ಈ ಜನಪರ ಕಾಳಜಿಯ ಕಾರ್ಯಕ್ಕೆ ಮನಪಾ ನಿಕಟಪೂರ್ವ ಕಾರ್ಪೊರೇಟರ್ ಸುಮಿತ್ರಾ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಮೇಲ್ವಿಚಾರಕರಾದ ರೋಷನ್ ಅಮಿನ್ ಅವರು ತಂಡದ ಮನವಿಗೆ ತಕ್ಷಣ ಸ್ಪಂದಿಸಿ, ಸಂಗ್ರಹಗೊಂಡ ತ್ಯಾಜ್ಯವನ್ನು ವಿಲೇವಾರಿ ಮಾಡಲು ವಾಹನದ ವ್ಯವಸ್ಥೆ ಕಲ್ಪಿಸಿಕೊಟ್ಟು ಸಹಕರಿಸಿದರು.
ಸುದ್ದಿ ಬಿತ್ತರಿಸುವ ಕೈಗಳು ಸ್ವಚ್ಛ ಮತ್ತು ಸ್ವಾಸ್ಥ್ಯ ಸಮಾಜಕ್ಕಾಗಿ ಪಣತೊಟ್ಟಾಗ ಅಲ್ಲಿ ಅಸಲಿ ಸಾಮಾಜಿಕ ಜಾಗೃತಿ ಮೂಡುತ್ತದೆ ಎಂಬುದಕ್ಕೆ ಈ ಘಟನೆ ಜ್ವಲಂತ ನಿದರ್ಶನ. ಕೇವಲ ವ್ಯವಸ್ಥೆಯನ್ನು ಟೀಕಿಸುತ್ತಾ ಕೂರದೆ, ಬದಲಾವಣೆಗೆ ತಾವೇ ಮುನ್ನುಡಿ ಬರೆದ ’ಮೀಡಿಯಾ ಮನಸುಗಳು’ ಬಳಗದ ಈ ಕಾರ್ಯವು ಇಂದು ಪ್ರತಿಯೊಬ್ಬ ಯುವಜನತೆಗೆ ಹಾಗೂ ಸಮಾಜಕ್ಕೆ ದೊಡ್ಡ ಪ್ರೇರಣೆಯಾಗಿದೆ. ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಬಸ್ ತಂಗುದಾಣವೀಗ ಮತ್ತೆ ಪ್ರಯಾಣಿಕರ ಬಳಕೆಗೆ ಯೋಗ್ಯವಾಗಿದ್ದು, ಸ್ಥಳೀಯರು ಮಾಧ್ಯಮ ತಂಡದ ಈ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.
