ದೀರ್ಘಕಾಲದ ಹೂಡಿಕೆ, ಕಾಯುವ ತಾಳ್ಮೆ ಇದ್ದಾಗ, ಮ್ಯೂಚುಯಲ್ ಫಂಡ್ ನಲ್ಲಿ ಹೆಚ್ಚು ಹಣಗಳಿಸಲು ಸಾಧ್ಯ: ಡಾ. ಬಾಲಾಜಿ ರಾವ್
Wednesday, September 23, 2026
ಮಂಗಳೂರು: ಶೇರುಪೇಟೆಯಲ್ಲಿ ಏರಿಳಿತ ಸಹಜ. ಆದರೆ ನಂಬಿಕೆ ಕಳೆದು ಕೊಳ್ಳದೆ ಹೂಡಿಕೆ ಮಾಡುವ ತಾಳ್ಮೆ ನಮ್ಮಲ್ಲಿ ಇರಬೇಕು ಎಂದು ಹಣಕಾಸು ತಜ್ಞ ಡಾ. ಬಾಲಾಜಿ ರಾವ್ ಹೇಳಿದರು.
ಅವರು ಸೆ.19 ರಂದು ಮಂಗಳೂರಿನ ದೀಪಾ ಕಂಫರ್ಟ್ ನಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯೊಂದಿಗೆ ಐ.ಸಿ.ಐ.ಸಿ.ಐ ಮ್ಯೂಚುವಲ್ ಫಂಡ್ ನ ಸಹಕಾರದಲ್ಲಿ ಹಣಕಾಸು ನಿರ್ವಹಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮುಂದಾಲೋಚನೆ ಭವಿಷ್ಯದ ದೃಷ್ಟಿಯಿಂದ ಉಳಿತಾಯ ಅತ್ಯಗತ್ಯ. ಎಷ್ಟೇ ಕಷ್ಟ ಬಂದರೂ ನಾವು ಬಂಗಾರವನ್ನು ಮಾರುವುದಿಲ್ಲ. ಅದೇ ರೀತಿ ಮ್ಯೂಚುವಲ್ ಫಂಡ್ ನಲ್ಲಿ ನಂಬಿಕೆ ಮತ್ತು ಸಹನೆಯಿಂದ ಧೀರ್ಘ ಕಾಲದ ವರಗೆ ಹೂಡಿಕೆ ಮಾಡಿದಾಗ ಹೆಚ್ಚು ಹೆಚ್ಚು ಹಣಗಳಿಸಲು ಸಾಧ್ಯ. ನಿತ್ಯಜೀವನದಲ್ಲಿ ಅಗತ್ಯ ವಸ್ತುಗಳ ಬೆಲೆ ಮುಂದೆ ಹತ್ತುಪಟ್ಟು ಹೆಚ್ಚುಗುತ್ತದೆ ಆಗ ನಮ್ಮ ಆದಾಯ ಕೂಡ ಹೆಚ್ಚಾಗಬೇಕು, ನಾವು ಬ್ಯಾಂಕುಗಳಲ್ಲಿ ಉಳಿತಾಯ ಖಾತೆ, ಸ್ಥಿರ ಠೇವಣಿಯಲ್ಲಿ ಹಣ ಇಟ್ಟಾಗ ಹೆಚ್ಚಿನ ಭದ್ರತೆ ಇದ್ದರೂ, ಲಾಭಾಂಶ ಕಡಿಮೆ, ಆದರೆ ಮ್ಯೂಚುಯಲ್ ಫಂಡ್ ನಲ್ಲಿ ಅದಕ್ಕಿಂತ ಹೆಚ್ಚು ಪಾಲು ಗಳಿಸಬಹುದು ಆದರೆ ಸರಿಯಾದ ಮಾಹಿತಿಯ ಕೊರತೆಯಿಂದ, ನಮಗೆ ಯಾವ ರೀತಿಯಲ್ಲಿ ಉಳಿತಾಯ ಮಾಡಬೇಕು ಎನ್ನುವ ಅರಿವು ಇರುವುದಿಲ್ಲ. ಯಾವ ಕಂಪನಿಯ ಮೇಲೆ ಹೂಡಿಕೆ ಮಾಡಬಹುದು ಮತ್ತು ಅದರ ಲಾಭ, ನಷ್ಟಗಳ ಬಗ್ಗೆ ಅರಿವು ಮೂಡಿಸಿದರು ಎಂದರು.
ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ, ಸಂಪನ್ಮೂಲ ವ್ಯಕ್ತಿಯಾದ ಡಾ. ಬಾಲಾಜಿ ರಾವ್ ಹಾಗೂ ಅತಿಥಿಗಳಿಂದ ವಿಶಿಷ್ಟ ರೀತಿಯಲ್ಲಿ ಮನಿಪ್ಲಾಂಟ್ ಗೆ ನ್ಯಾಣ ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ಹಣಕಾಸು ನಿರ್ವಹಣೆ ಕಾರ್ಯಕ್ರಮವನ್ನು ನಡೆಸಿಕೊಟ್ಟ ಸಂಪನ್ಮೂಲ ವ್ಯಕ್ತಿ ಹಣಕಾಸು ತಜ್ಞರಾದ ಡಾ. ಬಾಲಾಜಿ ರಾವ್ ಇವರನ್ನು ಮಂಗಳೂರು ಘಟಕದ ಪರವಾಗಿ ಘಟಕದ ಅಧ್ಯಕ್ಷರು ಗೌರವಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಘಟಕದ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು,ಸದಸ್ಯರು, ಐಸಿಐಸಿಐ ಮ್ಯೂಚುಯಲ್ ಫಂಡ್ ನ ರೋಹಿತ್ ಶೆಟ್ಟಿ, ರವೀಶ್ ಕುಮಾರ್, ಹಣಕಾಸು ನಿರ್ವಹಣೆಯ ಅಸಕ್ತರು, ಹಾಗೂ ಹೂಡಿಕೆದಾರರು ಉಪಸ್ಥಿತರಿದ್ದರು.
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕಿ ಸವಿತಾ ಕೋಟ್ಯಾನ್ ಸ್ವಾಗತಿಸಿದರು, ಕೋಶಾಧಿಕಾರಿ ಚಂದ್ರಶೇಖರ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

