ಮತದಾರರ ಹಕ್ಕಿನೊಂದಿಗೆ ಚೆಲ್ಲಾಟ ಬೇಡ: ಜ್ಞಾನೇಶ್ ಕುಮಾರ್ ತಕ್ಷಣ ರಾಜೀನಾಮೆ ನೀಡಲಿ: ದಿನೇಶ್ ಮೂಳೂರು

ಮತದಾರರ ಹಕ್ಕಿನೊಂದಿಗೆ ಚೆಲ್ಲಾಟ ಬೇಡ: ಜ್ಞಾನೇಶ್ ಕುಮಾರ್ ತಕ್ಷಣ ರಾಜೀನಾಮೆ ನೀಡಲಿ: ದಿನೇಶ್ ಮೂಳೂರು

ಮಂಗಳೂರು: ಭಾರತ ಪ್ರಜಾಪ್ರಭುತ್ವದ ಜೀವಾಳವಾಗಿರುವ ಮತದಾರರ ಹಕ್ಕಿನೊಂದಿಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಮತದಾರರ ಪಟ್ಟಿಯ ಪರಿಷ್ಕರಣೆ ಹಾಗೂ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ದೇಶಾದ್ಯಂತ ಗಂಭೀರ ಚರ್ಚೆ ಮತ್ತು ಪ್ರಶ್ನೆಗಳು ಎದ್ದಿರುವ ಸಂದರ್ಭದಲ್ಲಿ, ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಕಾಪಾಡುವ ನೈತಿಕ ಹೊಣೆಗಾರಿಕೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮೇಲಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ದಿನೇಶ್ ಮೂಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಚುನಾವಣಾ ಆಯೋಗದ ಇಬ್ಬರು ಚುನಾವಣಾ ಆಯುಕ್ತರು ವಿವಿಧ ನಿರ್ಧಾರಗಳ ಕುರಿತು ಹಲವು ಬಾರಿ ಆಕ್ಷೇಪಣೆ ದಾಖಲಿಸಿದ್ದಾರೆ ಎಂಬ ವರದಿಗಳು ಹೊರಬಂದಿವೆ. ಈ ಆಕ್ಷೇಪಣೆಗಳಲ್ಲಿ ಮತದಾರರ ಹೆಸರುಗಳ ಸೇರ್ಪಡೆ-ತೆಗೆದುಹಾಕುವಿಕೆ ಹಾಗೂ ಚುನಾವಣಾ ಮಾಹಿತಿಯ ನಿರ್ವಹಣೆಗೆ ಸಂಬಂಧಿಸಿದ ವಿಷಯಗಳೂ ಸೇರಿವೆ ಎಂದು ವರದಿಯಾಗಿದೆ.

ಈ ಬೆಳವಣಿಗೆಗಳು ಸಾಮಾನ್ಯ ಮತದಾರನ ಮನಸ್ಸಿನಲ್ಲಿ ಸಹಜವಾಗಿಯೇ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಮತದಾರರ ಪಟ್ಟಿಯಲ್ಲಿ ಯಾರ ಹೆಸರು ಇರಬೇಕು, ಯಾರ ಹೆಸರು ಇರಬಾರದು ಎಂಬ ಪ್ರಕ್ರಿಯೆಯೇ ಪ್ರಶ್ನಾರ್ಹವಾಗುವ ಪರಿಸ್ಥಿತಿ ನಿರ್ಮಾಣವಾಗಬಾರದು. ಒಬ್ಬ ಅರ್ಹ ನಾಗರಿಕನ ಮತದಾನದ ಹಕ್ಕಿಗೆ ಧಕ್ಕೆಯಾಗುವ ಯಾವುದೇ ಸಾಧ್ಯತೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು.

ಪಶ್ಚಿಮ ಬಂಗಾಳದ SIR ಪ್ರಕ್ರಿಯೆಗೆ ಸಂಬಂಧಿಸಿದಂತೆ ಮತದಾರರ ಹೆಸರುಗಳ ಅಳಿಸುವಿಕೆ ಮತ್ತು ಮೇಲ್ಮನವಿ ಪ್ರಕ್ರಿಯೆಯ ಕುರಿತು ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿರುವುದೂ ಈ ವಿಚಾರದ ಗಂಭೀರತೆಯನ್ನು ತೋರಿಸುತ್ತದೆ. ಲಕ್ಷಾಂತರ ಮೇಲ್ಮನವಿಗಳು ದಾಖಲಾಗಿದ್ದು, ಅವುಗಳ ಪರಿಹಾರಕ್ಕೆ ಸಂಬಂಧಿಸಿದ ಪ್ರಕ್ರಿಯೆಯೂ ಮುಂದುವರಿದಿದೆ.

ಚುನಾವಣೆ ಎಂದರೆ ಕೇವಲ ಮತಪೆಟ್ಟಿಗೆಯ ಮುಂದೆ ನಿಂತು ಮತ ಚಲಾಯಿಸುವ ಪ್ರಕ್ರಿಯೆಯಲ್ಲ. ಅರ್ಹ ಮತದಾರನ ಹೆಸರು ಮತದಾರರ ಪಟ್ಟಿಯಲ್ಲಿ ಸುರಕ್ಷಿತವಾಗಿರುವುದರಿಂದ ಹಿಡಿದು, ಆತ ತನ್ನ ಮತವನ್ನು ಸ್ವತಂತ್ರವಾಗಿ ಚಲಾಯಿಸುವವರೆಗೆ ಪ್ರತಿಯೊಂದು ಹಂತವೂ ಪ್ರಜಾಪ್ರಭುತ್ವದ ಭಾಗವಾಗಿದೆ. ಆದ್ದರಿಂದ ಮತದಾರರ ಹಕ್ಕಿನ ಬಗ್ಗೆ ಅನುಮಾನ ಮೂಡಿಸುವಂತಹ ಯಾವುದೇ ಬೆಳವಣಿಗೆಯನ್ನು ದೇಶದ ಜನತೆ ಗಂಭೀರವಾಗಿ ಪ್ರಶ್ನಿಸಬೇಕಾಗಿದೆ” ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ದಿನೇಶ್ ಮೂಳೂರು ಹೇಳಿದ್ದಾರೆ.

ಚುನಾವಣಾ ಆಯೋಗವು ಸ್ವತಂತ್ರ ಮತ್ತು ಸಂವಿಧಾನಾತ್ಮಕ ಸಂಸ್ಥೆಯಾಗಿದ್ದು, ಲೋಕಸಭೆ, ರಾಜ್ಯ ವಿಧಾನಸಭೆಗಳು ಸೇರಿದಂತೆ ಪ್ರಮುಖ ಚುನಾವಣೆಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿದೆ. ಚುನಾವಣಾ ಪ್ರಕ್ರಿಯೆಯ ಮೇಲಿನ ಜನರ ನಂಬಿಕೆಯೇ ಅದರ ಅತ್ಯಂತ ದೊಡ್ಡ ಶಕ್ತಿ. ‘ಚುನಾವಣಾ ಆಯೋಗದ ಮೇಲಿನ ವಿಶ್ವಾಸಕ್ಕೆ ಧಕ್ಕೆ ಬಂದರೆ ಅದರ ಪರಿಣಾಮ ಒಂದು ಪಕ್ಷಕ್ಕೆ ಮಾತ್ರವಲ್ಲ, ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೀಳುತ್ತದೆ. ಆದ್ದರಿಂದ ಎದ್ದಿರುವ ಎಲ್ಲಾ ಪ್ರಶ್ನೆಗಳಿಗೆ ಪಾರದರ್ಶಕವಾಗಿ ಉತ್ತರ ನೀಡಬೇಕು. ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಪುನಃ ಸ್ಥಾಪಿಸುವ ನಿಟ್ಟಿನಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ನೈತಿಕ ಹೊಣೆಗಾರಿಕೆಯನ್ನು ವಹಿಸಿಕೊಂಡು ತಕ್ಷಣ ರಾಜೀನಾಮೆ ನೀಡಬೇಕು’ ಎಂದು ದಿನೇಶ್ ಮೂಳೂರು ಆಗ್ರಹಿಸಿದ್ದಾರೆ.

ಮತದಾರರ ಹಕ್ಕು ಯಾವುದೇ ಸರ್ಕಾರ, ಯಾವುದೇ ಪಕ್ಷ ಅಥವಾ ಯಾವುದೇ ಅಧಿಕಾರಿಗಿಂತ ದೊಡ್ಡದು. ಮತದಾರನ ಮತವೇ ಪ್ರಜಾಪ್ರಭುತ್ವದ ಅಂತಿಮ ಶಕ್ತಿ. ಆ ಮತದ ಹಕ್ಕಿನೊಂದಿಗೆ ಚೆಲ್ಲಾಟವಾಡಲು ಯಾರಿಗೂ ಅವಕಾಶವಿಲ್ಲ.

ಮತದಾರರ ಹಕ್ಕುಗಳ ರಕ್ಷಣೆ, ಚುನಾವಣಾ ಪ್ರಕ್ರಿಯೆಯ ಸಂಪೂರ್ಣ ಪಾರದರ್ಶಕತೆ ಮತ್ತು ಚುನಾವಣಾ ಆಯೋಗದ ಮೇಲಿನ ಜನರ ವಿಶ್ವಾಸವನ್ನು ಉಳಿಸುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗವು ಉದ್ಭವಿಸಿರುವ ಎಲ್ಲ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಬೇಕು. ಈ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ದಿನೇಶ್ ಮೂಳೂರು ಮತ್ತೊಮ್ಮೆ ಒತ್ತಾಯಿಸಿದ್ದಾರೆ.

“ಮತ ಉಳಿದರೆ ಪ್ರಜಾಪ್ರಭುತ್ವ ಉಳಿಯುತ್ತದೆ; ಮತದಾರರ ವಿಶ್ವಾಸ ಉಳಿದರೆ ಸಂವಿಧಾನದ ಆತ್ಮ ಉಳಿಯುತ್ತದೆ. ಮತದಾರರ ಹಕ್ಕಿನ ರಕ್ಷಣೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ದಿನೇಶ್ ಮೂಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article