ಜಿಲ್ಲೆಯ ಹಲವಡೆ ಉತ್ತಮ ಮಳೆ

ಜಿಲ್ಲೆಯ ಹಲವಡೆ ಉತ್ತಮ ಮಳೆ

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣದೊಂದಿಗೆ ಸಾಧಾರಣದಿಂದ ಉತ್ತಮ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಗುರುವಾರ ಬೆಳಗ್ಗಿನ ಜಾವ ಮಳೆಯಾಗಿದೆ.

ಬೆಳಗ್ಗೆ ಧರ್ಮಸ್ಥಳ, ಬಂಟ್ವಾಳ, ಮಂಗಳೂರು, ಸುರತ್ಕಲ್, ಕೊಣಾಜೆ ಸೇರಿದಂತೆ ಹಲವಡೆ ಕೆಲವು ಹೊತ್ತು ಉತ್ತಮ ಮಳೆಯಾಗಿದೆ. ಕಳೆದ 1-2 ವಾರದಿಂದ ಜಿಲ್ಲೆಯ ವಾತಾವರಣ ಬಿಸಿಯಾಗಿದ್ದು, ಗರಿಷ್ಠ 33.7ಡಿ.ಸೆ ವರೆಗೂ ತಲುಪಿತ್ತು. ಗುರುವಾರ ಅಲ್ಲಲ್ಲಿ ಮಳೆಯಾಗಿದ್ದರಿಂದ ಗರಿಷ್ಟ ತಾಪಮಾನ 30.1ಡಿ.ಸೆ, ಕನಿಷ್ಠ ತಾಪಮಾನ 23.4 ಡಿ.ಸೆ ದಾಖಲಾಗಿದೆ.

ಶುಕ್ರವಾರ ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಕಡಿಮೆ ಇದ್ದು, ಮೋಡ ಹಾಗೂ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸೆ.26ರ ತನಕ ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆಯ ಸಾಧ್ಯತೆಗಳಿದ್ದು, 29ರಿಂದ ಘಟ್ಟದ ಕೆಳಗಿನ ಪ್ರದೇಶಗಳಿಂದ ಗುಡುಗು ಸಹಿತ ಮಳೆ ಆರಂಭವಾಗುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

 ವಾಯುಭಾರ ಕುಸಿತದ ಪ್ರಭಾವ

 ಬಂಗಾಲಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತದ ಪ್ರಭಾವದಿಂದಾಗಿ ಅರಬ್ಬಿ ಸಮುದ್ರ ವ್ಯಾಪ್ತಿಯಲ್ಲಿನ ಹವಾಮಾನದಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಇದರ ಪರಿಣಾಮವಾಗಿ ಕರಾವಳಿ ಸೇರಿದಂತಂತೆ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಳೆದ ಕೆಲವು ದಿನಗಳಿಂದ ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಜನರಿಗೆ ತಂಪಾದ ವಾತಾವರಣದ ಅನುಭವವಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಈ ವಾಯುಭಾರ ಕುಸಿತವು ರಾಜ್ಯದ ಮಳೆ ಪರಿಸ್ಥಿತಿಗೆ ಹೊಸ ಚೈತನ್ಯ ನೀಡಿದೆ. ಈ ಮಳೆಯು ಕೃಷಿ ಚಟುವಟಿಕೆಗಳಿಗೆ ಹಾಗೂ ತೋಟಗಾರಿಕೆಗೆ ಹೊಸ ಜೀವ ತುಂಬಿದ್ದು, ರೈತರಲ್ಲಿ ಮಂದಹಾಸ ಮೂಡಿಸಿದೆ. ಜತೆಗೆ, ಜಲಮೂಲಗಳ ನೀರಿನ ಮಟ್ಟ ಸುಧಾರಿಸಲು ಇದು ಸಹಕಾರಿಯಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article