ಕಾಂಗ್ರೆಸ್‌ನಿಂದ ಸಾರ್ವಜನಿಕರ ತೆರಿಗೆ ಹಣ ಪೋಲು: ವಿವೇಕಾನಂದ ಸಾಲಿನ್ಸ್

ಕಾಂಗ್ರೆಸ್‌ನಿಂದ ಸಾರ್ವಜನಿಕರ ತೆರಿಗೆ ಹಣ ಪೋಲು: ವಿವೇಕಾನಂದ ಸಾಲಿನ್ಸ್

ಮಂಗಳೂರು: ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ಎಂದು ಹೇಳಲಾಗಿದೆ. ಆದರೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಘೋಷಿಸಿಲ್ಲ. ಸರ್ಕಾರದ ಪ್ರವಾಸೋದ್ಯಮ ಯೋಜನೆಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಯುವಕರಿಗೆ ಉದ್ಯೋಗ ನೀಡದ ಯೋಜನೆಗಳಿಗೆ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ಹೇಳಿದರು.

ಲೈಟ್ಹೌಸ್ ಬಳಿ 3-ಸ್ಟಾರ್ ಹೋಟೆಲ್ಗೆ 60.34 ಕೋಟಿ ರೂ., ಗುರುಪುರ ನದಿ ಮತ್ತು ದ್ವೀಪಗಳಿಗೆ 125.34 ಕೋಟಿ ರೂ., ಕೊಡಿಕಲ್ನಲ್ಲಿ ರಿವರ್ ಫ್ರಂಟ್ ಯೋಜನೆಗೆ 73 ಕೋಟಿ ರೂ., ತಣ್ಣೀರು ಬಾವಿ ಬೀಚ್ ಗ್ಲಾಂಪಿಂಗ್ ಹಾಗೂ ಸಾಗರ ಅನುಭವ ಕೇಂದ್ರಕ್ಕೆ 53 ಕೋಟಿ ರೂ., ಮರವಂತೆ ಬೀಚ್ ಸಾಹಸ ಮನೋರಂಜನೆಗೆ 48 ಕೋಟಿ ರೂ., ಚಿಕ್ಕಮಗಳೂರಿನ ರೆಸಾರ್ಟ್ ಗೆ  64 ಕೋಟಿ ರೂ. ವೆಚ್ಚ ಮಾಡುತ್ತಿರುವುದು ಸರಿಯಾದ ನಿರ್ಧಾರಗಳಲ್ಲ. ಇವುಗಳಿಂದ ಸ್ಥಳೀಯ ಜನರಿಗೆ ಉದ್ಯೋಗ ಮತ್ತು ಜೀವನೋಪಾಯ ಕಂಡುಕೊಳ್ಳಲು ಯಾವುದೇ ನೆರವಾಗುವುದಿಲ್ಲ. ಈ ಯೋಜನೆಗಳನ್ನು ಸ್ಥಳೀಯ ನಿವಾಸಿಗಳೊಂದಿಗೆ ಚರ್ಚಿಸದೆ ನಿರ್ಧರಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ 12 ಪರಿಸರ ಸಂವೇದನಾಶೀಲ ದ್ವೀಪಗಳ ಅಭಿವೃದ್ಧಿ ಹೆಸರಿನಲ್ಲಿ ಬಹು ಮಹಡಿ ಕಟ್ಟಡಗಳನ್ನು ಅಥವಾ ಸೇತುವೆ ನಿರ್ಮಾಣ ಮಾಡುವುದು ಪರಿಸರಕ್ಕೆ ಮಾರಕ. ಸರ್ಕಾರಕ್ಕೆ ನಿಜವಾಗಿಯೂ ಕರಾವಳಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಇಚ್ಛೆಯಿದ್ದರೆ, ಕೇವಲ ಕಟ್ಟಡ ನಿರ್ಮಾಣಕ್ಕೆ ಹಣ ಪೋಲು ಮಾಡುವ ಬದಲು, ಪ್ರವಾಸಿಗರ ಸುರಕ್ಷತೆಯನ್ನು ಕಾಪಾಡಲು ಕರಾವಳಿಯುದ್ದಕ್ಕೂ ತರಬೇತಿ ಪಡೆದ ಜೀವರಕ್ಷಕರನ್ನು ನೇಮಿಸುವಂತಹ ಮಾನವ ಸಂಪನ್ಮೂಲಗಳಲ್ಲಿ ಹೂಡಿಕೆ ಮಾಡಬೇಕು. ಸ್ಥಳೀಯ ಜನರನ್ನು ಒಳಗೊಂಡ ಮತ್ತು ಕರಾವಳಿ ಭಾಗದ ಯುವಕರಿಗೆ ನಿಜವಾದ ಉದ್ಯೋಗಗಳನ್ನು ಸೃಷ್ಟಿಸುವ ವಾಸ್ತವಿಕ ಪ್ರವಾಸೋದ್ಯಮ ಯೋಜನೆಯನ್ನು ಸರ್ಕಾರ ರೂಪಿಸಬೇಕು ಎಂದರು.

 ತುಳು ಭಾಷೆಯನ್ನು ಎರಡನೇ ಹೆಚ್ಚುವರಿ ಭಾಷೆಯನ್ನಾಗಿ ಮಾಡಲು ಮುಂದಾಗಿರುವುದನ್ನು ನಾವು ಸ್ವಾಗತಿಸುತ್ತೇವೆ. ಕೇಂದ್ರ ಸರಕಾರ ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂದು ಹೇಳಿದರು.

ಆಪ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್. ಎಲ್. ಪಿಂಟೊ, ದ.ಕ. ಮಹಿಳಾ ಘಟಕ ಅಧ್ಯಕ್ಷೆ ಸೀಮಾ ಮಡಿವಾಳ, ಜಿಲ್ಲಾ ಕಾರ್ಯದರ್ಶಿ ವಾಸುದೇವ್, ಕಬೀರ್ ಕಾಟಿಪಳ್ಳ, ಗ್ಲಾವಿನ್ ಡಿಸೋಜ, ನಿನಾ ರೈ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article