‘ಹೈರಾಕ್ಸ್’ ಜಾಗತಿಕ ಫಿಟ್ನೆಸ್’: ದ.ಕ. ಜಿಲ್ಲಾಧಿಕಾರಿ ಅಪರೂಪದ ಸಾಧನೆ

‘ಹೈರಾಕ್ಸ್’ ಜಾಗತಿಕ ಫಿಟ್ನೆಸ್’: ದ.ಕ. ಜಿಲ್ಲಾಧಿಕಾರಿ ಅಪರೂಪದ ಸಾಧನೆ


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಹಾಗೂ ಮಂಗಳೂರಿನ ಪ್ರಸಿದ್ಧ ಫಿಟ್ನೆಸ್ ತರಬೇತುದಾರ ಪ್ರದೀಪ್ ಕುಮಾರ್ ಆಚಾರ್ಯ ಜೋಡಿಯು ಮುಂಬೈನಲ್ಲಿ ನಡೆದ ವಿಶ್ವಪ್ರಸಿದ್ಧ ‘ಹೈರಾಕ್ಸ್’ (HYROX) ಜಾಗತಿಕ ಫಿಟ್ನೆಸ್ ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಅಪರೂಪದ ಸಾಧನೆ ಮಾಡಿದೆ. 

ಮುಂಬೈನ ಗೋರೆಗಾಂವ್‌ನಲ್ಲಿರುವ ನೆಸ್ಕೋ ಸೆಂಟರ್‌ನಲ್ಲಿ ಸೆಪ್ಟೆಂಬರ್ 17ರಿಂದ 20ರವರೆಗೆ ಆಯೋಜಿಸಲಾಗಿದ್ದ ಈ ಕ್ರೀಡಾಕೂಟದ ಪುರುಷರ ಡಬಲ್ಸ್ ವಿಭಾಗದಲ್ಲಿ ಕಣಕ್ಕಿಳಿದಿದ್ದ ಈ ಜೋಡಿಯು, ಅತ್ಯಂತ ಕಠಿಣ ಸವಾಲುಗಳನ್ನು ಮೀರಿ ನಿಗದಿತ ಗುರಿ ತಲುಪಿದೆ. ಅಂತರರಾಷ್ಟ್ರೀಯ ಪವರ್ ಲಿಫ್ಟರ್ ಹಾಗೂ ‘ಕಾಷಾರ್ಪ್ ಫಿಟ್ನೆಸ್’ ಸಂಸ್ಥೆಯ ಪ್ರದೀಪ್ ಕುಮಾರ್ ಆಚಾರ್ಯ ಅವರೊಂದಿಗೆ ದರ್ಶನ್ ಎಚ್.ವಿ ಜೋಡಿಯಾಗಿ ಭಾಗವಹಿಸಿದ್ದರು. 

ಈ ಜೋಡಿಯು ಒಟ್ಟು 8 ಕಿಲೋಮೀಟರ್ ಓಟ ಹಾಗೂ 8 ಅತ್ಯಂತ ಕಠಿಣ ಫಂಕ್ಷನಲ್ ವ್ಯಾಯಾಮಗಳನ್ನು ಒಳಗೊಂಡ ಸಂಪೂರ್ಣ ರೇಸ್ ಅನ್ನು ಕೇವಲ 1 ಗಂಟೆ, 39 ನಿಮಿಷ ಮತ್ತು 9 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ದಾಖಲೆ ಬರೆದಿದೆ. ಜರ್ಮಿನಿಯಲ್ಲಿ 2017ರಲ್ಲಿ ಆರಂಭಗೊಂಡ ‘ಹೈರಾಕ್ಸ್’ ಜಗತ್ತಿನ ಅತ್ಯಂತ ಪ್ರಸಿದ್ಧ ಒಳಾಂಗಣ (Indoor) ಫಿಟ್ನೆಸ್ ಸ್ಪರ್ಧೆಯಾಗಿದೆ. ಇದು ಕೇವಲ ಓಟವಲ್ಲದೆ, ಪ್ರತಿಯೊಬ್ಬ ಕ್ರೀಡಾಪಟುವಿನ ದೈಹಿಕ ಶಕ್ತಿ, ಸ್ಟ್ಯಾಮಿನಾ, ಸಹಿಷ್ಣುತೆ ಮತ್ತು ತಂಡದ ಒಗ್ಗಟ್ಟನ್ನು ಪರೀಕ್ಷಿಸುತ್ತದೆ. ಈ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಪ್ರತಿ 1 ಕಿಲೋಮೀಟರ್ ಓಟ ಮುಗಿಸಿದ ತಕ್ಷಣ ಒಂದು ನಿಗದಿತ ಫಂಕ್ಷನಲ್ ವ್ಯಾಯಾಮ ಕೇಂದ್ರಕ್ಕೆ ತೆರಳಿ ವರ್ಕ್‌ಔಟ್ ಪೂರ್ಣಗೊಳಿಸಬೇಕು. ಹೀಗೆ ಒಟ್ಟು 8 ಕಿಲೋಮೀಟರ್ ಓಟದ ಜೊತೆಗೆ ಸ್ಕೀಯಿಂಗ್, ಸ್ಲೆಡ್ ಪುಶ್, ಸ್ಲೆಡ್ ಪುಲ್, ಬರ್ಪೀ ಬ್ರಾಡ್ ಜಂಪ್ಸ್, ರೋಯಿಂಗ್, ಫಾರ್ಮರ್ಸ್ ಕ್ಯಾರಿ, ಸ್ಯಾಂಡ್ಬ್ಯಾಗ್ ಲಂಜಸ್ ಹಾಗೂ ವಾಲ್ ಬಾಲ್ಸ್ ಎಂಬ 8 ಕಠಿಣ ವ್ಯಾಯಾಮ ಕೇಂದ್ರಗಳ ಸರಣಿಯನ್ನು ಪೂರ್ಣಗೊಳಿಸಬೇಕಾಗುತ್ತದೆ.

ಜನಪ್ರಿಯ ಡಬಲ್ಸ್ ವಿಭಾಗದಲ್ಲಿ ಇಬ್ಬರೂ ಸ್ಪರ್ಧಿಗಳು 8 ಕಿಲೋಮೀಟರ್ ಓಟವನ್ನು ಒಟ್ಟಿಗೆ ಪೂರ್ಣಗೊಳಿಸಬೇಕಿದ್ದು, ವ್ಯಾಯಾಮದ ತೂಕ ಹಾಗೂ ಶ್ರಮವನ್ನು ಹಂಚಿಕೊಳ್ಳಲು ಅವಕಾಶವಿರುತ್ತದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಈ ಫಿಟ್ನೆಸ್ ಸಾಧನೆಗೆ ಕರಾವಳಿ ಭಾಗದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article