ಕೃಷಿ ಕೋಟಾದಡಿ 3,200 ಸೀಟು: ವಿದ್ಯಾರ್ಥಿಗಳಿಗೆ ಕೃಷಿ ಪ್ರಾಯೋಗಿಕ ಪರೀಕ್ಷೆ ಕುರಿತು ಮಾರ್ಗದರ್ಶನ

ಕೃಷಿ ಕೋಟಾದಡಿ 3,200 ಸೀಟು: ವಿದ್ಯಾರ್ಥಿಗಳಿಗೆ ಕೃಷಿ ಪ್ರಾಯೋಗಿಕ ಪರೀಕ್ಷೆ ಕುರಿತು ಮಾರ್ಗದರ್ಶನ


ಮೂಡುಬಿದಿರೆ: ಕೃಷಿಕರು ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಕರ್ನಾಟಕ ಸರ್ಕಾರ ಕೃಷಿ ಶಿಕ್ಷಣದಲ್ಲಿ 3,200 ಸೀಟುಗಳನ್ನು ಮೀಸಲಿಟ್ಟಿದ್ದು, ಈ ಅವಕಾಶವನ್ನು ಪಡೆಯಲು ಅರ್ಹತೆ, ಪ್ರಾಯೋಗಿಕ ಪರೀಕ್ಷೆಯ ಸಿದ್ಧತೆ ಹಾಗೂ ಪ್ರವೇಶ ಪ್ರಕ್ರಿಯೆಯ ಕುರಿತು ವಿದ್ಯಾರ್ಥಿಗಳು ಸಮಗ್ರ ಅರಿವು ಹೊಂದಿರಬೇಕು ಎಂದು ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಸೈನ್ಸಸ್ ಆ್ಯಂಡ್ ಟೆಕ್ನಾಲಜಿಯ ಡೀನ್ ಡಾ. ಎಸ್.ಎನ್. ವಾಸುದೇವ ಜೈನ್ ಹೇಳಿದರು.


ಅವರು ಆಳ್ವಾಸ್ ಪಿಯು ಕಾಲೇಜಿನಲ್ಲಿ ನಡೆದ ‘ಕೃಷಿಕರ ಕೋಟಾದಡಿ ಕೃಷಿ ಪ್ರಾಯೋಗಿಕ ಪರೀಕ್ಷೆಗಳ’ ಕುರಿತ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೃಷಿ ಕ್ಷೇತ್ರವು ದೇಶದ ಆರ್ಥಿಕತೆ ಹಾಗೂ ಆಹಾರ ಭದ್ರತೆಯ ಪ್ರಮುಖ ಆಧಾರವಾಗಿದ್ದು, ದೇಶದ ಸುಮಾರು 80 ಕೋಟಿ ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ.

ಕೃಷಿಯೋಗ್ಯ ಭೂಮಿಯ ವಿಸ್ತರಣೆಗೆ ಕೈಗಾರಿಕೀಕರಣ ಸೇರಿದಂತೆ ವಿವಿಧ ಕಾರಣಗಳಿಂದ ಮಿತಿ ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ಲಭ್ಯವಿರುವ ಭೂಮಿ, ನೀರು ಹಾಗೂ ಇತರ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು ಉತ್ಪಾದಕತೆ ಹೆಚ್ಚಿಸುವುದು ಅನಿವಾರ್ಯವಾಗಿದೆ. ಆಧುನಿಕ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳ ಅಳವಡಿಕೆಯೇ ಭವಿಷ್ಯದ ಕೃಷಿಯ ಪ್ರಮುಖ ಅವಶ್ಯಕತೆ ಎಂದರು.  

ದೇಶದ ಪ್ರಧಾನಿಗಳ ‘ಪರ್ ಡ್ರಾಪ್, ಮೋರ್ ಕ್ರಾಪ್’ ಪರಿಕಲ್ಪನೆಯನ್ನು ಉಲ್ಲೇಖಿಸಿದ ಡಾ. ಜೈನ್, ಕಡಿಮೆ ನೀರಿನಲ್ಲಿ ಹೆಚ್ಚು ಉತ್ಪಾದನೆ ಪಡೆಯುವಂತಹ ವೈಜ್ಞಾನಿಕ ಕೃಷಿ ಪದ್ಧತಿಗಳ ಕುರಿತು ವಿದ್ಯಾರ್ಥಿಗಳು ಅರಿವು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕರಾವಳಿಯಲ್ಲಿ ಕೃಷಿ ಶಿಕ್ಷಣಕ್ಕೆ ಹೊಸ ಆಯಾಮ:

ಆಳ್ವಾಸ್ ಕೃಷಿ ವಿಜ್ಞಾನಗಳ ಸಂಸ್ಥೆಯು ಕರಾವಳಿ ಕರ್ನಾಟಕದಲ್ಲಿ ಕೃಷಿ ಶಿಕ್ಷಣಕ್ಕೆ ಹೊಸ ಆಯಾಮ ನೀಡಿದ ಮೊದಲ ಕೃಷಿ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಸ್ಥೆಯಲ್ಲಿ ದೊರೆಯುತ್ತಿರುವ ವಿಶೇಷ ತರಬೇತಿ ಹಾಗೂ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಕೃಷಿ ಕ್ಷೇತ್ರದ ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಕಳೆದ ವರ್ಷ ಸಂಸ್ಥೆಯ ವಿದ್ಯಾರ್ಥಿಯೊಬ್ಬರು ಕೃಷಿ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿರುವುದನ್ನೂ ಉಲ್ಲೇಖಿಸಿದರು.

ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸಾದಕತ್ ಮಾತನಾಡಿ, ಆಳ್ವಾಸ್ ಸಂಸ್ಥೆಯು ದೇಶದ ವಿವಿಧ,,ರಾಜ್ಯಗಳ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶ ಕಲ್ಪಿಸುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಉನ್ನತ ರ‍್ಯಾಂಕ್‌ಗಳನ್ನು ಪಡೆದು ಸಾಧನೆ ಮಾಡುತ್ತಿರುವುದು ಸಂಸ್ಥೆಯ ಶೈಕ್ಷಣಿಕ ಪರಂಪರೆಗೆ ಸಾಕ್ಷಿಯಾಗಿದೆ ಎಂದರು. 

ಆಳ್ವಾಸ್ ಪಿಯು ಕಾಲೇಜಿನ ಉಪಪ್ರಾಂಶುಪಾಲೆ ಜಾನ್ಸಿ ಪಿ.ಎನ್. ಉಪಸ್ಥಿತರಿದ್ದರು. ವೇದಾವತಿ ಎ. ಕಾರ್ಯಕ್ರಮ ನಿರೂಪಿಸಿ,  ಸಂಯೋಜಕ ಗುಣಪ್ರಸಾದ್ ಕರಂದೂರು ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article