ಆಳ್ವಾಸ್ ಸಾಂಸ್ಕೃತಿಕ ವಿದ್ಯಾರ್ಥಿಗಳಿಗೆ ಕೋಡ್‌ಕ್ರಾಫ್ಟ್‌ನಿಂದ 6.28 ಲಕ್ಷ ರೂ. ಸಿ.ಎಸ್.ಆರ್. ನೆರವು

ಆಳ್ವಾಸ್ ಸಾಂಸ್ಕೃತಿಕ ವಿದ್ಯಾರ್ಥಿಗಳಿಗೆ ಕೋಡ್‌ಕ್ರಾಫ್ಟ್‌ನಿಂದ 6.28 ಲಕ್ಷ ರೂ. ಸಿ.ಎಸ್.ಆರ್. ನೆರವು


ಮೂಡುಬಿದಿರೆ: ಆಳ್ವಾಸ್‌ನ ಕಲೆ, ಸಂಸ್ಕೃತಿ ಮತ್ತು ಪರಂಪರೆ ಸಂರಕ್ಷಣೆಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಮಂಗಳೂರು ಸಂಸ್ಥೆಯು ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್.ಆರ್) ಉಪಕ್ರಮದಡಿ ನುಡಿಸಿರಿ ವಿರಾಸತ್ ಸಾಂಸ್ಕೃತಿಕ ತಂಡಗಳಲ್ಲಿ ಸಕ್ರಿಯರಾಗಿರುವ 628 ವಿದ್ಯಾರ್ಥಿಗಳಿಗೆ ಒಟ್ಟು ರೂ.6.28 ಲಕ್ಷ ಆರ್ಥಿಕ ನೆರವು ನೀಡಿದೆ.


628 ವಿದ್ಯಾರ್ಥಿಗಳಿಗೆ ತಲಾ ರೂ.1,000ರಂತೆ ಒಟ್ಟು ರೂ.6,28,000 ನೆರವು ನೀಡಲಾಗಿದ್ದು, ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಕೆಲವು ವಿದ್ಯಾರ್ಥಿಗಳಿಗೆ ಮೊತ್ತವನ್ನು ಹಸ್ತಾಂತರಿಸಲಾಯಿತು.

ಆಳ್ವಾಸ್ ಕಾಲೇಜಿನ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಕಲೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್‌ನ ಸಿ.ಎಸ್.ಆರ್ ಬೆಂಬಲ ಶ್ಲಾಘನೀಯ ಎಂದು ಹೇಳಿದರು.

ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಗುರು–ಶಿಷ್ಯ ಪರಂಪರೆ ನಿಧಾನವಾಗಿ ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಲೆಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು. ಕಲೆ ಜಾತಿ, ಧರ್ಮ, ಲಿಂಗ ಸೇರಿದಂತೆ ಎಲ್ಲ ಭೇದಗಳನ್ನು ಮೀರಿ ಮಾನವೀಯತೆಯನ್ನು ಬೆಸೆಯುವ ಶಕ್ತಿಯನ್ನು ಹೊಂದಿದೆ ಎಂದರು.

ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಕ್ಷಿತ್ ರೈ ಮಾತನಾಡಿ, ಯಶಸ್ಸಿಗೆ ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ. ನಿರೀಕ್ಷಿತ ಫಲಿತಾಂಶ ದೊರೆಯದಿದ್ದರೂ ನಿರಾಶರಾಗದೆ ಮತ್ತಷ್ಟು ಪ್ರಯತ್ನಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ದೀಕ್ಷಿತ್ ರೈ ಅವರನ್ನು ಗೌರವಿಸಲಾಯಿತು. ಸಂಸ್ಥೆಯ ಕಾರ್ಯಾಚರಣೆಗಳ ಮುಖ್ಯಸ್ಥ ಜೋಬಿನ್ ಜೋಸೆಫ್, ಆಳ್ವಾಸ್‌ನ ಉದ್ಯಮಶೀಲತೆ ಅಭಿವೃದ್ಧಿ ಘಟಕದ ಮುಖ್ಯಸ್ಥ ವೇಣು ರಾವ್ ದೇವಾ ಉಪಸ್ಥಿತರಿದ್ದರು. ಕಲಾ ವಿಭಾಗದ ಮುಖ್ಯಸ್ಥ ವೇಣುಗೋಪಾಲ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article