ಮೂಡುಬಿದಿರೆಯಲ್ಲಿ ಶ್ರೀ ಲಕ್ಷ್ಮಣಾನಂದ ಸಹಕಾರ ಸಂಘದ 7ನೇ ಶಾಖೆ ಶುಭಾರಂಭ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ದೀಪ ಬೆಳಗಿಸಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘವು ಮೂಲತಃ ರಾಮಕ್ಷತ್ರೀಯ ಸಮುದಾಯಕ್ಕೆ ಸಹಕಾರ ನೀಡುವ ಉದ್ದೇಶದಿಂದ ಆರಂಭಗೊಂಡ ಸಂಸ್ಥೆಯಾಗಿದೆ. ಶ್ರೀ ಲಕ್ಷ್ಮಣಾನಂದ ಸ್ವಾಮೀಜಿ ಮೂಲತಃ ವೈದ್ಯರಾಗಿದ್ದು, ಸಮಾಜ ಕಟ್ಟುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದರು. ಸಂಸ್ಥೆಯನ್ನು ಕೃಷ್ಣ ಜೆ. ಪಾಲೇಮಾರ್ ಅವರು ಮುನ್ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಕೃಷ್ಣ ಜೆ. ಪಾಲೇಮಾರ್ ಅವರು ಸಚಿವರಾಗಿದ್ದ ಅವಧಿಯಲ್ಲಿ ಮಂಗಳೂರು ಬಂದರು ಹಾಗೂ ಜಲಸಾರಿಗೆ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಮೀನುಗಾರಿಕೆ ಸಚಿವರಾಗಿದ್ದಾಗಲೂ ಹಲವು ರೀತಿಯ ನೆರವು ನೀಡಿದ್ದಾರೆ. ರಾಜಕೀಯ ಮಾತ್ರವಲ್ಲದೆ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಅವರ ಕೊಡುಗೆ ಗಮನಾರ್ಹವಾಗಿದೆ. 1997ರಲ್ಲಿ ಆರಂಭಗೊಂಡ ಸಂಸ್ಥೆ ಇಂದು 500ಕ್ಕೂ ಅಧಿಕ ಠೇವಣಿದಾರರನ್ನು ಹೊಂದಿದ್ದು, ಮೂಡುಬಿದಿರೆ ಶಾಖೆಯೂ ಉತ್ತಮವಾಗಿ ಬೆಳೆಯಲಿ ಎಂದು ಹಾರೈಸಿದರು.
ಶಾಸಕ ಉಮಾನಾಥ ಎ. ಕೋಟ್ಯಾನ್ ಮಾತನಾಡಿ, ಮೂಡುಬಿದಿರೆಯ ಜನರ ಮೇಲೆ ವಿಶ್ವಾಸವಿಟ್ಟು ಸಂಸ್ಥೆ ಇಲ್ಲಿ ಶಾಖೆ ಆರಂಭಿಸಿರುವುದು ಸಂತಸದ ವಿಚಾರ. ಶಾಖೆಯ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು. ಮಂಗಳೂರು ನಗರದ ಅಭಿವೃದ್ಧಿಯಲ್ಲಿ ಕೃಷ್ಣ ಜೆ. ಪಾಲೇಮಾರ್ ಅವರ ಕೊಡುಗೆ ಅಪಾರವಾಗಿದೆ ಎಂದರು.
ಹಲವು ಅಭಿವೃದ್ಧಿ ಕಾರ್ಯ:
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಮೂಡುಬಿದಿರೆಯಲ್ಲಿ ಸಹಕಾರ ಸಂಘಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಜಿಲ್ಲೆಗೆ ಕೃಷ್ಣ ಜೆ. ಪಾಲೇಮಾರ್ ಅವರ ಕೊಡುಗೆ ಅಪಾರವಾಗಿದೆ. ಅವರ ಅವಧಿಯಲ್ಲಿ ಮರವೂರಿನಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ವೆಂಟೆಡ್ ಡ್ಯಾಂ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದರು.
ಕರಾವಳಿಯಾದ್ಯಂತ ಶಾಖೆ ವಿಸ್ತರಣೆ:
ಸಂಘದ ಅಧ್ಯಕ್ಷ ಹಾಗೂ ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಮಾತನಾಡಿ, ಮೂಡುಬಿದಿರೆಯಲ್ಲಿ ಶಾಖೆ ತೆರೆಯಬೇಕು ಎಂಬುದು ಹಲವು ವರ್ಷಗಳ ಕನಸಾಗಿತ್ತು. ಕರಾವಳಿಯಾದ್ಯಂತ ಶಾಖೆಗಳನ್ನು ವಿಸ್ತರಿಸುವ ಉದ್ದೇಶ ಹೊಂದಿದ್ದು, ಎಸ್‌ಎಲ್‌ವಿ ಶಾಖೆಗಳು ಎಲ್ಲೆಡೆ ಇರಬೇಕು. ಸಂಸ್ಥೆಯ ಬೆಳವಣಿಗೆಗೆ ಸಮಾಜ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಕಟ್ಟಡದ ಮಾಲಕ ಹುಸೇನ್ ಶೇಖ್ ಅವರನ್ನು ಗೌರವಿಸಲಾಯಿತು.
ಮೂಡುಬಿದಿರೆ ರಾಮಕ್ಷತ್ರೀಯ ಸಂಘದ ಅಧ್ಯಕ್ಷ ಪ್ರೇಮಾನಂದ ಕೆ.ಎಸ್., ಉದ್ಯಮಿ ಶ್ರೀಪತಿ ಭಟ್, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸುದರ್ಶನ್ ಎಂ, ನ್ಯಾಯವಾದಿ ಬಾಹುಬಲಿ ಪ್ರಸಾದ್, ಸಂಸ್ಥೆಯ ಸಿಇಒ ಚಂದನ್ ಕೋಟೆಕಾರ್ ಹಾಗೂ ಶಾಖಾ ವ್ಯವಸ್ಥಾಪಕಿ ಚಂದ್ರಿಕಾ ಉಪಸ್ಥಿತರಿದ್ದರು.
ಅಚಿ೯ತ್ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.