ಸಂಸ್ಕೃತ ವಿಶ್ವದ ಜ್ಞಾನ ಮತ್ತು ವೈಭವದ ಭಾಷೆ: ಡಾ. ಜಯಶಂಕರ್ ಕಂಗಣ್ಣಾಯ
ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗದ ವತಿಯಿಂದ ಬುಧವಾರ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ‘ಸಂಸ್ಕೃತೋತ್ಸವ’ ಕಾರ್ಯಕ್ರಮದಲ್ಲಿ ‘ಸಂಸ್ಕೃತದ ವಿಶ್ವ ವೈಭವ’ ಕುರಿತು ಮಾತನಾಡಿದ ಅವರು, ಸಂಸ್ಕೃತದ ಮಹತ್ವವನ್ನು ಭಾರತೀಯ ಜ್ಞಾನ ಪರಂಪರೆಯ ಹಿನ್ನೆಲೆಯಲ್ಲಿ ವಿವರಿಸಿದರು.
ಸಂಸ್ಕೃತವು ವೇದಗಳ ಮೂಲಕ ಭಾರತೀಯ ಸಾಂಸ್ಕೃತಿಕ ಜಗತ್ತಿಗೆ ಶಾಂತಿ, ಸಹಬಾಳ್ವೆ ಮತ್ತು ಲೋಕಕಲ್ಯಾಣದ ಸಂದೇಶವನ್ನು ನೀಡಿದೆ. ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ಆಶಯವು ಸಮಸ್ತ ಮಾನವಕುಲದ ಒಳಿತನ್ನು ಬಯಸುವ ಭಾರತೀಯ ಚಿಂತನೆಯ ಪ್ರತೀಕವಾಗಿದೆ. ಸಂಸ್ಕೃತ ಸಾಹಿತ್ಯ ಮತ್ತು ಜ್ಞಾನ ಪರಂಪರೆಯಲ್ಲಿ ವ್ಯಕ್ತಿಯ ಒಳಿತಿನೊಂದಿಗೆ ಜಗತ್ತಿನ ಕಲ್ಯಾಣಕ್ಕೂ ಮಹತ್ವ ನೀಡಲಾಗಿದೆ.
ಸಂಸ್ಕೃತವನ್ನು ಕೇವಲ ಹಿಂದಿನ ಕಾಲದ ಭಾಷೆಯಾಗಿ ನೋಡುವ ಬದಲು, ಭಾರತೀಯ ಜ್ಞಾನ ಪರಂಪರೆಯನ್ನು ಅರ್ಥಮಾಡಿಕೊಳ್ಳುವ ಜೀವಂತ ಅಧ್ಯಯನ ಕ್ಷೇತ್ರವಾಗಿ ಪರಿಚಯಿಸುವ ಅಗತ್ಯವಿದೆ ಎಂದರು.
ಆಳ್ವಾಸ್ ಆಯುರ್ವೇದ ಕಾಲೇಜಿನ ಸಂಹಿತಾ ಹಾಗೂ ಹಾಗೂ ಸಿದ್ಧಾಂತ ವಿಭಾಗದ ಮುಖ್ಯಸ್ಥೆ ಡಾ. ಸೌಮ್ಯ ಸರಸ್ವತಿ ತಂತ್ರಾಂಶಗಳಲ್ಲಿ ಸಂಸ್ಕೃತವನ್ನು ಬಳಸುವುದರ ಕುರಿತು ತಿಳಿಸಿದರು.
ಕಾಯ೯ಕ್ರಮದಲ್ಲಿ ಆಳ್ವಾಸ್ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ ವಿನಾಯಕ ಭಟ್ ಗಾಳಿಮನೆ ಪ್ರಸ್ತಾವಿಕ ಮಾತುಗಳನ್ನಾಡಿದರು. ಮಾನ್ಯ ಸ್ವಾಗತಿಸಿ, ಚೇತನಾ ವಂದಿಸಿ, ತೇಜಸ್ವಿ ಅತಿಥಿಗಳನ್ನು ಪರಿಚಯಿಸಿ, ಅನನ್ಯ ಹೆಗಡೆ ಪ್ರಾರ್ಥಿಸಿ, ಶಮಾ ನಿರೂಪಿಸಿದರು.