ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ ಬೆಳೆಸಿ: ಶಶಿಧರ ಶೆಟ್ಟಿ
ಇಂದು ಬೀಚ್ನಲ್ಲಿ ಸಂಗ್ರಹಿಸಿರುವ ಪ್ಲಾಸ್ಟಿಕ್, ಗಾಜು, ಫೋಮ್ ಸೇರಿದಂತೆ ಹಲವು ವಸ್ತುಗಳನ್ನು ಕಸ ಎಂದು ಮಾತ್ರ ಪರಿಗಣಿಸುವ ಬದಲು, ಸರಿಯಾಗಿ ವಿಂಗಡಿಸಿ ಮರುಬಳಕೆ ಮಾಡಬಹುದಾದ ಸಂಪನ್ಮೂಲಗಳು ಎಂದು ನೋಡಬೇಕು. ಮನೆಯಿಂದಲೇ ತ್ಯಾಜ್ಯವನ್ನು ಸರಿಯಾಗಿ ವಿಂಗಡಿಸಿ ವಿಲೇವಾರಿ ಮಾಡಿದರೆ, ಅದರ ಬಹುಪಾಲನ್ನು ಮರುಬಳಕೆ ಅಥವಾ ಮರುಸಂಸ್ಕರಣೆಗೆ ಬಳಸಬಹುದು. ಆದರೆ ಸೂಕ್ತ ವಿಲೇವಾರಿ ವ್ಯವಸ್ಥೆಯ ಕೊರತೆ ಹಾಗೂ ಸಾರ್ವಜನಿಕರ ನಿರ್ಲಕ್ಷ್ಯದಿಂದ ಇಂತಹ ವಸ್ತುಗಳು ಬೀಚ್, ನದಿ ಹಾಗೂ ಜಲಮೂಲಗಳನ್ನು ಸೇರುತ್ತಿವೆ. ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ನಾವಿಂದು ಇಲ್ಲಿ ಸ್ವಚ್ಛತಾ ಕಾರ್ಯ ನಡೆಸುವುದಕ್ಕಿಂತಲೂ ದೊಡ್ಡ ಉದ್ದೇಶದೊಂದಿಗೆ ಸೇರಿದ್ದೇವೆ. ಮುಂದಿನ ಪೀಳಿಗೆಗೆ ಪರಿಸರದ ವಾಸ್ತವ ಸ್ಥಿತಿಯನ್ನು ನೇರವಾಗಿ ತೋರಿಸಿ, ಇಂದಿನಿಂದಲೇ ಅವರಲ್ಲಿ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ.
ಮಕ್ಕಳು ತಮ್ಮ ಸುತ್ತಮುತ್ತಲಿನ ಪರಿಸರವನ್ನು ತಮ್ಮದೇ ಮನೆಯ ಭಾಗವೆಂದು ಭಾವಿಸಬೇಕು. ನಮ್ಮ ಮನೆ, ನಮ್ಮ ಊರು, ನಮ್ಮ ಪರಿಸರ, ನಮ್ಮ ಭೂಮಿ ಎಂಬ ಭಾವನೆ ಅವರಲ್ಲಿ ಬೆಳೆದಾಗ ಮಾತ್ರ ನಿಜವಾದ ಪರಿಸರ ಕಾಳಜಿ ರೂಪುಗೊಳ್ಳುತ್ತದೆ. ಪರಿಸರ ಸಂರಕ್ಷಣೆ ಸರ್ಕಾರ ಅಥವಾ ಕೆಲವು ಪರಿಸರ ಕಾರ್ಯಕರ್ತರ ಜವಾಬ್ದಾರಿ ಮಾತ್ರವಲ್ಲ, ಪ್ರತಿಯೊಬ್ಬ ಕುಟುಂಬದ ಜವಾಬ್ದಾರಿಯಾಗಿದೆ.
ಮಕ್ಕಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡುವುದರಿಂದ ಅವರಲ್ಲಿ ಸ್ವಚ್ಛತೆಯ ಅಭ್ಯಾಸ ಮಾತ್ರವಲ್ಲದೆ, ಜವಾಬ್ದಾರಿ, ಸಾಮಾಜಿಕ ಕಾಳಜಿ ಮತ್ತು ಪ್ರಕೃತಿಯೊಂದಿಗೆ ಸಂಬಂಧ ಬೆಳೆಸಬಹುದು. ಇಂದು ನಾವು ಅವರಿಗೆ ಹೇಳುವ ಒಂದು ಸಣ್ಣ ಮಾತು ಅಥವಾ ತೋರಿಸುವ ಒಂದು ದೃಶ್ಯ, ಅವರ ಜೀವನಪೂರ್ತಿ ಪರಿಸರದ ಬಗ್ಗೆ ಅವರ ನಡವಳಿಕೆಯನ್ನು ರೂಪಿಸುವ ಸಾಧ್ಯತೆ ಇದೆ. ಆದ್ದರಿಂದ ಸ್ವಚ್ಛತೆಯ ಅಭಿಯಾನಗಳು ಕೇವಲ ಕಸ ತೆಗೆಯುವ ಕಾರ್ಯಕ್ರಮಗಳಾಗದೆ, ಮನೋಭಾವ ಬದಲಿಸುವ ಅಭಿಯಾನಗಳಾಗಬೇಕು ಎಂದರು. ಪ್ಲಾಸ್ಟಿಕ್, ರಬ್ಬರ್, ಗಾಜು ಸೇರಿದಂತೆ ಪರಿಸರಕ್ಕೆ ಹಾನಿಕಾರಕ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯದೆ, ಮೂಲದಲ್ಲಿಯೇ ವಿಂಗಡಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಅಭ್ಯಾಸವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಕುಟುಂಬದ ಹಿರಿಯರು ಅನುಸರಿಸುವ ಪರಿಸರ ಸ್ನೇಹಿ ನಡೆ ಮಕ್ಕಳ ಮೇಲೆಯೂ ನೇರ ಪರಿಣಾಮ ಬೀರುವುದರಿಂದ, ಜಾಗೃತಿಯ ಆರಂಭ ಮನೆಯಲ್ಲಿಯೇ ಆಗಬೇಕು ಎಂದರು.
ಕುಟುಂಬದ ಸದಸ್ಯರು ಹಾಗೂ ಮಕ್ಕಳು ಬೀಚ್ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು, ವಿವಿಧ ರೀತಿಯ ತ್ಯಾಜ್ಯಗಳನ್ನು ಸಂಗ್ರಹಿಸಿ ಪ್ರತ್ಯೇಕಿಸಿದರು.

