ಜಿಲ್ಲಾಮಟ್ಟದ ಗುಡ್ಡಗಾಡು ಓಟ: ಎರಡು ವಿಭಾಗದಲ್ಲೂ ಆಳ್ವಾಸ್ ಚಾಂಪಿಯನ್
Thursday, September 24, 2026
ಮೂಡುಬಿದಿರೆ: ಎಡಪದವಿನ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಗುಡ್ಡಗಾಡು ಓಟದಲ್ಲಿ ಮೂಡುಬಿದಿರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡಗಳು ಚಾಂಪಿಯನ್ ಆಗಿ ಸಮಗ್ರ ಪ್ರಶಸ್ತಿ ಪಡೆದಿವೆ. ಬಾಲಕರ ವಿಭಾಗದಲ್ಲಿ 10 ಹಾಗೂ ಬಾಲಕಿಯರ ವಿಭಾಗದಲ್ಲಿ 13 ಅಂಕ ಗಳಿಸಿ ಆಳ್ವಾಸ್ ಈ ಸಾಧನೆ ಮಾಡಿದೆ.
ಬಾಲಕರ ವಿಭಾಗದಲ್ಲಿ ಆಳ್ವಾಸ್‌ನ ಸಮರ್ಥ್ ಪ್ರಥಮ, ಸಂತೋಷ್ ದ್ವಿತೀಯ, ವರುಣ್ ತೃತೀಯ, ಮಿಥುನ್ ನಾಲ್ಕನೇ ಹಾಗೂ ದರ್ಶನ್ ಆರನೇ ಸ್ಥಾನ ಪಡೆದರು. ಎಸ್.ಡಿ.ಎಂ. ಕಾಲೇಜು ಉಜಿರೆಯ ಲಿತೇಶ್ ಐದನೇ ಸ್ಥಾನ ಪಡೆದರು.
ಬಾಲಕಿಯರ ವಿಭಾಗದಲ್ಲಿ ಆಳ್ವಾಸ್‌ನ ನಾಗಿಣಿ ಪ್ರಥಮ, ಪ್ರಿಯಾಂಕ ದ್ವಿತೀಯ, ಸ್ವಪ್ನಾ ನಾಲ್ಕನೇ ಹಾಗೂ ಜಿ. ಕಿರಣ ಆರನೇ ಸ್ಥಾನ ಪಡೆದರು. ನೂಜಿಬಾಳ್ತಿಲ ಬೆಥನಿ ಪ.ಪೂ. ಕಾಲೇಜಿನ ಮೋಕ್ಷ ತೃತೀಯ ಹಾಗೂ ಪ್ರಮೀಳಾ ಐದನೇ ಸ್ಥಾನ ಪಡೆದರು.
ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.
