ಎಕ್ಸಲೆಂಟ್ ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ: ಸಾಂಸ್ಕೃತಿಕ ವೈಭವ
ಮುದ್ದು ಕೃಷ್ಣ ಮತ್ತು ಯಶೋಧೆಯರ ಸಮ್ಮುಖದಲ್ಲಿ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಕೃಷ್ಣನ ಜೀವನ ಮೌಲ್ಯಗಳು, ಧರ್ಮ ಹಾಗೂ ಸಂಸ್ಕೃತಿಯ ಮಹತ್ವವನ್ನು ವಿವರಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಎಸ್‌ಡಿಎಂ ಕಲಾ ಕೇಂದ್ರದ ಮುಖ್ಯ ಸಲಹೆಗಾರ ಸೋನಿಯಾ ವರ್ಮಾ, ಪ್ರತಿಯೊಬ್ಬರ ಆತ್ಮದಲ್ಲಿಯೂ ದೈವಿಕ ಶಕ್ತಿ ಅಡಗಿದ್ದು, ಆಧುನಿಕ ವೈಜ್ಞಾನಿಕ ತಂತ್ರಜ್ಞಾನದ ಜತೆಗೆ ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳ ಅರಿವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಅಗತ್ಯ ಎಂದು ಹೇಳಿದರು. ಪ್ರತಿಯೊಬ್ಬ ಮಗುವಿನಲ್ಲಿಯೂ ವಿಶೇಷ ಸಾಮರ್ಥ್ಯ ಅಡಗಿದ್ದು, ಸಾಮಾನ್ಯ ಬಿದಿರು ಸುಂದರ ಕೊಳಲಾಗಿ ರೂಪುಗೊಳ್ಳುವಂತೆ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರ ಮೇಲಿದೆ.
ಶ್ರೀಕೃಷ್ಣನ ಜನ್ಮದಿನವು ಕೇವಲ ಹಬ್ಬವಲ್ಲದೆ, ಧರ್ಮ, ಕರ್ತವ್ಯ ಮತ್ತು ಜೀವನ ಸಂದೇಶಗಳನ್ನು ಸ್ಮರಿಸುವ ಪವಿತ್ರ ಸಂದರ್ಭವಾಗಿದೆ. ಇಂತಹ ಹಬ್ಬಗಳು ಸಮಾಜದ ಎಲ್ಲರನ್ನು ಒಗ್ಗೂಡಿಸಿ ಸಂಸ್ಕೃತಿ ಮತ್ತು ಬಾಂಧವ್ಯವನ್ನು ಗಟ್ಟಿಗೊಳಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ, ಜೀವನದಲ್ಲಿ ಸಂಸ್ಕಾರ ಮತ್ತು ಉತ್ತಮ ಮೌಲ್ಯಗಳಿದ್ದರೆ ಎಲ್ಲಿ ಬೇಕಾದರೂ ನೆಮ್ಮದಿಯಿಂದ ಬದುಕಬಹುದು ಎಂಬುದಕ್ಕೆ ಶ್ರೀಕೃಷ್ಣನ ಜೀವನವೇ ಸಾಕ್ಷಿಯಾಗಿದೆ.ಶ್ರೀಕೃಷ್ಣನ ಆದರ್ಶಗಳು ಬದುಕಿಗೆ ದಾರಿದೀಪವಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಸೋನಿಯಾ ವರ್ಮಾ ಅವರನ್ನು ಸಂಸ್ಥೆಯ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಿದ್ದ ಯಶೋದಾ-ಕೃಷ್ಣ ವೇಷಭೂಷಣ ಸ್ಪರ್ಧೆ ಹಾಗೂ ಇತರ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಗಣ್ಯರ ಉಪಸ್ಥಿತಿಯಲ್ಲಿ ಬಹುಮಾನ ವಿತರಿಸಲಾಯಿತು.
ಖ್ಯಾತ ನೃತ್ಯ ಸಂಯೋಜಕ ರೂಪೇಶ್ ಅತಿಥಿಯಾಗಿ ಭಾಗವಹಿಸಿದ್ದರು.
ಸಂಸ್ಥೆಯ ನಿರ್ದೇಶಕ ಬಿ.ಪಿ. ಸಂಪತ್ ಕುಮಾರ್ ಜೈನ್, ಶಾಲೆಯ ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್, ಉಪಮುಖ್ಯ ಶಿಕ್ಷಕ ಜಯಶೀಲ, ಸಿಬಿಎಸ್‌ಇ ವಿಭಾಗದ ಸಂಯೋಜಕಿ ವಿಮಲಾ ಶೆಟ್ಟಿ, ಅಪೇಕ್ಷಾ ಜೈನ್, ಯಶಸ್ವಿ ವೆಲ್ಡಿಂಗ್ ಇಂಜಿನಿಯರಿಂಗ್ ವರ್ಕ್ಸ್‌ನ ಮಾಲಕ ಲೀಲೇಶ್ ಕೋಟ್ಯಾನ್ ಸೇರಿದಂತೆ ಸಂಸ್ಥೆಯ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ಹೆಚ್ಚಿನ ಸಂಖ್ಯೆಯ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಾನ್ವಿ ಮತ್ತು ಮಾನಸ ಕಾರ್ಯಕ್ರಮ ನಿರೂಪಿಸಿದರು. ಮೌಲ್ಯ ವೈ.ಆರ್. ಜೈನ್ ಅತಿಥಿಗಳನ್ನು ಪರಿಚಯಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಶ್ರೀಕೃಷ್ಣನ ಜೀವನದ ವಿವಿಧ ಪ್ರಸಂಗಗಳನ್ನು ಬಿಂಬಿಸುವ ನೃತ್ಯ ರೂಪಕಗಳು ಪ್ರದರ್ಶನಗೊಂಡಿದ್ದು, ವಿದ್ಯಾರ್ಥಿಗಳ ಪ್ರತಿಭೆ, ಶಿಸ್ತು ಮತ್ತು ಕಲಾ ನೈಪುಣ್ಯ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.