ಪುತ್ತೂರು ದೇವಳದಲ್ಲಿ ಭ್ರಷ್ಟಾಚಾರ-ಬಿಜೆಪಿ ಆರೋಪ: ಸೆ.29 ರಂದು ಸೂಕ್ತ ತನಿಖೆಗೆ ಆಗ್ರಹಿಸಿ ಪ್ರತಿಭಟನೆ
ಅವರು ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ದೇವಳದ ಲೆಕ್ಕಾಚಾರ, ವಶಪಡಿಸಿಕೊಂಡ ಜಾಗಗಳಲ್ಲಿದ್ದ ಮರಗಳ ಸಾಗಾಟ, ತೆರವು ಮಾಡಿದ ಕಟ್ಟಡಗಳ ಸಾಮಾಗ್ರಿಗಳ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಸೂಕ್ತ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ದೇವಳದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಸಬೇಕಾದರೂ ಧಾರ್ಮಿಕ ದತ್ತಿಇಲಾಖೆಯ ಅನುಮತಿ ಪಡೆಯಬೇಕು. ಜೀರ್ಣೋದ್ಧಾರ ಸಮಿತಿ ರಚನೆ ಮಾಡಿ ಹಣ ಸಂಗ್ರಹ ಮಾಡಲಾಗುತ್ತಿದೆ. ಆದರೆ ಈ ತನಕ ಸಮಿತಿಗೆ ಅನುಮತಿ ದೊರಕಿಲ್ಲ. ಹಣ ನೀಡುವ ದಾನಿಗಳಿಗೆ ಯಾವ ರಶೀದಿ ನೀಡುತ್ತಿದ್ದಾರೆ. ಧಾರ್ಮಿಕ ದತ್ತಿ ಇಲಾಖೆಯ ಯಾವುದೇ ನಿಯಮಗಳನ್ನು ವ್ಯವಸ್ಥಾಪನಾ ಸಮಿತಿ ಪಾಲಿಸಿಲ್ಲ ಎಂಬುವುದಕ್ಕೆ ದೇವಳದ ಅಡಿಟ್ ವರದಿ ಪ್ರತ್ಯಕ್ಷ ಸಾಕ್ಷಿಯಾಗಿದೆ. ಸಣ್ಣಪುಟ್ಟ ಖರ್ಚು ಎಂದು ತೋರಿಸಿ ರೂ.40 ಲಕ್ಷವನ್ನು ದೇವಳದ ಖಾತೆಯಿಂದ ಪಡೆಯಲಾಗಿದೆ. ಜೆಸಿಬಿ ಬಿಲ್ ಎಂದು ವ್ಯವಸ್ಥಾಪನಾ ಸಮಿತಿ ಸದಸ್ಯನಿಗೆ 70 ಲಕ್ಷ ಪಾವತಿ ಮಾಡಲಾಗಿದೆ. ದೇವಳದಲ್ಲಿ 5 ನೂತನ ಕಟ್ಟೆಗಳನ್ನು ನಿರ್ಮಿಸಿದವರಿಂದ ತಲಾ 25 ಲಕ್ಷ ಪಡೆಯಲಾಗಿದೆ. ದೇವಳದ ಆವರಣದಲ್ಲಿನ ಮನೆಗಳು ಹಾಗೂ ಸಭಾಂಗಣ ತೆರವು ಸಂದರ್ಭದಲ್ಲಿ ಅದರಲ್ಲಿದ್ದ ಕಿಟಕಿ, ಬಾಗಿಲು, ಕಬ್ಬಿಣ, ಪರಿಸರದಲ್ಲಿದ್ದ ಬೆಳೆಬಾಳುವ ಮರಗಳ ಲೆಕ್ಕಾಚಾರವನ್ನು ಕೊಟ್ಟಿಲ್ಲ ಎಂದು ಅವರು ಆರೋಪಿಸಿದರು.
ಅಯ್ಯಪ್ಪಗೆ ನಿತ್ಯ ಪೂಜೆ ಇಲ್ಲ:
ನಿತ್ಯ ಮೂರು ಪೂಜೆ ನಡೆಯುತ್ತಿದ್ದ ಅಯ್ಯಪ್ಪನ ಗುಡಿ ತೆರವು ಮಾಡಿ ಅದನ್ನು ಶಾರದಾ ಮಂದಿರದಲ್ಲಿ ಇಡಲಾಗಿದೆ. ಆದರೆ ಈಗ ಅದಕ್ಕೆ ಪೂಜೆ ಮಾಡಲಾಗುತ್ತಿಲ್ಲ. ನಾಗನಗುಡಿ, ನವಗ್ರಹ ಗುಡಿಗಳಿಗೆ ಸಲ್ಲುತ್ತಿದ್ದ ನಿತ್ಯಪೂಜೆ ಸಂಪೂರ್ಣ ನಿಲ್ಲಿಸಲಾಗಿದೆ. ಇದು ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ ಎಂದರು. ಆಧುನಿಕ ಶೌಚಾಲಯಕ್ಕೆ ದೇವಳದ ಪಾರ್ಶ್ವಭಾಗದಲ್ಲಿ ಶಿಲಾನ್ಯಾಸ ಮಾಡಲಾಗಿದೆ. ಇಲ್ಲಿ ಶೌಚಾಲಯ ನಿರ್ಮಾಣ ಮಾಡಲು ಹೊರಟ್ಟದ್ದು ವ್ಯವಸ್ಥೆಯ ದುರಂತವಾಗಿದೆ. ಭಕ್ತರ ಸಭೆ ಕರೆದು ಅದಕ್ಕೆ ಕಾಫಿ ತಿಂಡಿ ಬಿಲ್ ರೂ.1.48 ಲಕ್ಷ ವೆಚ್ಚ ತೋರಿಸಿದ್ದಾರೆ. ರಾಜಕಾಲುವೆ ಭಾಗದಲ್ಲಿ ತಡೆಗೋಡೆ ಮಾಡುವ ಸಂದರ್ಭ ಹಿಂದೆ ಎಡಿಬಿ ಯೋಜನೆಯಡಿ ಕಟ್ಟಲಾಗಿದ್ದ ಕಗ್ಗಲುಗಳನ್ನು ಏನು ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದರು.
ಸಂರಕ್ಷಣಾವೇದಿಕೆ ಪರ ಅಲ್ಲ:
ನಾವು ಸಂರಕ್ಷಣಾ ವೇದಿಕೆ ಪರ ಅಲ್ಲ. ಅವರ ವಿಚಾರಗಳ ಪರವೂ ಅಲ್ಲ. ಅವರು ಎತ್ತಿದ ಕೆಲ ಪ್ರಶ್ನೆಗಳ ಪರ. ಜನತೆಯ ಅಭಿಪ್ರಾಯಕ್ಕೆ ದೇವಳದ ಆಡಳಿತ ಸಮಿತಿ ಗೌರವ ಕೊಡಬೇಕು. ಎಲ್ಲವನ್ನೂ ನಿಯಮಬಾಹಿರವಾಗಿ ನಡೆದುಕೊಂಡಾಗ ಅದನ್ನು ಪ್ರಶ್ನಿಸುವ ಹಕ್ಕು ದೇವಳದ ಪ್ರತಿ ಭಕ್ತನಿಗೂ ಇದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಬಿಜೆಪಿ ಮಹಿಳಾ ನಗರಾಧ್ಯಕ್ಷೆ ಸ್ವರ್ಣಲತಾ ಹೆಗ್ಡೆ, ಬಿಜೆಪಿ ನಗರ ಮಂಡಲದ ಮಾಧ್ಯಮ ಪ್ರಮುಖ್ ಮಹೇಶ್ ಕೇರಿ ಉಪಸ್ಥಿತರಿದ್ದರು.