ಶಾಸಕರ ತೇಜೋವಧೆ ಆರೋಪ: ಪತ್ರಿಕಾಗೋಷ್ಠಿಗೆ ಬಂದ ಹಕೀಂ ಕೂರ್ನಡ್ಕ ವಿರುದ್ಧ ಆಕ್ರೋಶ, ಪತ್ರಿಕಾಭವನದಿಂದ ಭದ್ರತೆಯಲ್ಲಿ ಕರೆದೊಯ್ದ ಪೊಲೀಸರು
ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಪತ್ರಿಕಾ ಭವನಕ್ಕೆ ಆಗಮಿಸಿದ ಹಕೀಂ ಕೂರ್ನಡ್ಕ ಅವರು ಶಾಸಕರ ವಿರುದ್ದ ಪತ್ರಿಕಾಗೋಷ್ಠಿ ನಡೆಸಿದ್ದರು. ಇದೇ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಪುತ್ತೂರಿನ ಪತ್ರಿಕಾ ಭವನದ ಪಕ್ಕದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿನ ಒಳರೋಗಿಗಳಿಗೆ ಅವರ ಬೆಂಬಲಿಗರು ಹಣ್ಣು ಹಂಪಲು ವಿತರಣೆಗಾಗಿ ಆಗಮಿಸಿದ್ದರು. ಈ ವೇಳೆ ಹಕೀಂ ಕೂರ್ನಡ್ಕ ಅವರು ಸುದ್ಧಿಗೋಷ್ಠಿ ನಡೆಸುತ್ತಿರುವುದನ್ನು ಗಮನಿಸಿದ ಅಶೋಕ್ ರೈ ಬೆಂಬಲಿಗರು ಶಾಸಕರ ತೇಜೋವಧೆ ಮಾಡುತ್ತಿರುವುದಾಗಿ ಆರೋಪಿಸಿ ಪತ್ರಿಕಾ ಭವನದ ಮುಂಭಾಗದಲ್ಲಿ ಜಮಾಯಿಸಿದರು. ಅಲ್ಲದೆ ಹಕೀಂ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರು. ಈ ನಡುವೆ ಹಕೀಂ ಕೂರ್ನಡ್ಕ ಅವರು ಪತ್ರಿಕಾಗೋಷ್ಠಿ ಪೂರ್ಣಗೊಳಿಸಿದರು. ಪತ್ರಿಕಾಗೋಷ್ಟಿ ಮುಗಿಯುವ ವೇಳೆ ನೂರಾರು ಮಂದಿ ಕಾರ್ಯಕರ್ತರು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಶಾಸಕರು ಕೂಡಾ ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಕೀಂ ಕೂರ್ನಡ್ಕ ಅವರನ್ನು ಭದ್ರತೆಯ ಮೂಲಕ ಪೊಲೀಸ್ ಜೀಪಿನಲ್ಲಿ ಕರೆದೊಯ್ದರು.
ಶಾಸಕ ಅಶೋಕ್ ರೈ ಸ್ಪಷ್ಟನೆ:
ಘಟನೆಯ ಕುರಿತು ಸ್ಪಷ್ಟನೆ ನೀಡಿದ ಶಾಸಕ ಅಶೋಕ್ ಕುಮಾರ್ ರೈ ಅವರು ಕಾರ್ಯಕರ್ತರು ಹಾಗೂ ಕೆಲವರು ಊಟಕ್ಕೆ ಇಂದಿರಾ ಕ್ಯಾಂಟೀನ್ ಗೆ ತೆರಳುತ್ತಿದ್ದ ವೇಳೆ ಹಕೀಂ ಕೂರ್ನಡ್ಕ ಎಂಬವರು ಕಾರ್ಯಕರ್ತರನ್ನು ಹೀಯಾಳಿಸಿ ಮಾತನಾಡಿ, ನಿಮ್ಮ ಜಾತಕವನ್ನೆಲ್ಲ ಇವತ್ತು ಪ್ರೆಸ್‌ನಲ್ಲಿ ಜಾಹೀರಾತು ಮಾಡುತ್ತೇನೆ. ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡುವವರು ಯಾರಿದ್ದಾರೆ.? ನನ್ನ ಬಗ್ಗೆ ಪ್ರಕಟಣೆ ಕೊಟ್ಟಿದ್ದಾರೆ ಅವರಿಗೆ ಬುದ್ದಿ ಕಲಿಸುತ್ತೇನೆ ಎಂದೆಲ್ಲಾ ಪ್ರಚೋದನಾಕಾರಿಯಾಗಿ ಮಾತನಾಡಿ ಅವರ ತಂದೆ, ತಾಯಿ ಹೆಂಡತಿ ಬಗ್ಗೆ ಅವಹೇಳನವಾಗಿ ಮಾತನಾಡಿದ್ದಾರೆ ಎಂದು ಕಾರ್ಯಕರ್ತರು ಹೇಳಿದ್ದಾರೆ.
ಮಹಿಳೆಯರಿಗೆ ಕೀಳುಮಟ್ಟದ ಮೆಸೇಜ್ ಕಳುಹಿಸುವುದು, ಅವರ ಬಗ್ಗೆ ಬಗ್ಗೆ ಕೀಳಾಗಿ ಮಾತನಾಡುವುದು ನಿಮ್ಮನ್ನು ನೋಡಿಕೊಳ್ಳುತ್ತೇನೆ. ನನಗೆ ದೊಡ್ಡ ದೊಡ್ಡ ಅಧಿಕಾರಿಗಳ ಪರಿಚಯ ಇದೆ. ನನ್ನನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ ಹೀಗೆಲ್ಲಾ ಕಾರ್ಯಕರ್ತರ ಎದುರು ಮಾತನಾಡಿದಾಗ ಅದನ್ನು ಕೇಳುವ ಸಲುವಾಗಿ ಕೆಲವರು ಆಗಮಿಸಿದ್ದರು. ಈ ವೇಳೆ ಕೆಲ ಚರ್ಚೆಗಳು ನಡೆದಿದೆ. ನಾನು ಆಸ್ಪತ್ರೆಗೆ ಹಣ್ಣು-ಹಂಪಲು ನೀಡಲು ಬರುತ್ತಿದ್ದು, ಕಾರು ನಿಲ್ಲಿಸಿ ಅವರನ್ನೆಲ್ಲಾ ವಾಪಸ್ಸು ಕಳುಹಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮಾಡಿದ್ದೇನೆ.
ಒಬ್ಬರನ್ನು ಹೀಯಾಳಿಸಿ ಏನೂ ಆಗುವಂತದ್ದು ಇಲ್ಲ. ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬುದು ನಮ್ಮ ಉದ್ದೇಶ. ಈ ಕುರಿತು ಇಲಾಖೆ ಸರಿಯಾದ ಕ್ರಮ ಕೈಗೊಳ್ಳಬೇಕು. ಅವರಿಗೆ ಸರಿಯಾದ ಬುದ್ದಿ ಹೇಳಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂದು ತಿಳಿಸಿದರು.