ಧ್ವನಿವರ್ಧಕ ಸಮಯ ಪೊಲೀಸರದ್ದಲ್ಲ, ಸರಿಯಾದ ಸಮಯಕ್ಕೆ ಕಾರ್ಯಕ್ರಮ ಮುಗಿಸಿ: ಡಿವೈಎಸ್ಪಿ ಪ್ರಮೋದ್‌ಕುಮಾರ್

ಧ್ವನಿವರ್ಧಕ ಸಮಯ ಪೊಲೀಸರದ್ದಲ್ಲ, ಸರಿಯಾದ ಸಮಯಕ್ಕೆ ಕಾರ್ಯಕ್ರಮ ಮುಗಿಸಿ: ಡಿವೈಎಸ್ಪಿ ಪ್ರಮೋದ್‌ಕುಮಾರ್


ಪುತ್ತೂರು: ಸುಪ್ರೀಂ ಕೋರ್ಟಿನ ಆದೇಶದಂತೆ ಯಾವುದೇ ಕಾರ್ಯಕ್ರಮದಲ್ಲಿ ರಾತ್ರಿ 10 ಗಂಟೆ ನಂತರ ಧ್ವನಿವರ್ಧಕಕ್ಕೆ ಅವಕಾಶ ಇಲ್ಲ. ಹಾಗಾಗಿ ಗಣೇಶೋತ್ಸವ ಕಾರ್ಯಕ್ರಮಗಳನ್ನು ಮುಂಚಿತವಾಗಿ ಆರಂಭಿಸಿದರೆ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಈ ನಿಯಮ ಪೊಲೀಸರು ಮಾಡಿದ್ದಲ್ಲ. ನ್ಯಾಯಾಲಯದ ತೀರ್ಮಾನ. ಇದಕ್ಕೆ ಕಾರ್ಯಕ್ರಮ ಆಯೋಜಕರು ಸ್ಪಂಧಿಸಬೇಕು ಎಂದು ಪುತ್ತೂರು ಡಿವೈಎಸ್ಪಿ ಪ್ರಮೋದ್ ಕುಮಾರ್ ತಿಳಿಸಿದರು. 

ಅವರು ಗುರುವಾರ ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಸಾರ್ವಜನಿಕ ಗಣೇಶೋತ್ಸವಗಳಿಗೆ ಸಂಬಂಧಿಸಿ ಪೊಲೀಸ್ ಪುತ್ತೂರು ಉಪವಿಭಾಗ ಮಟ್ಟದ ಶಾಂತಿ ಸಭೆಯಲ್ಲಿ ಮಾತನಾಡಿದರು.

ಎಲ್ಲಾ ಕಡೆಯೂ ಸಾಧ್ಯವಾದಷ್ಟು ಪೊಲೀಸರನ್ನು ನಿಯೋಜನೆ ಮಾಡುತ್ತೇವೆ. ಆದರೆ ಆಯೋಜಕರ ಕಡೆಯಿಂದಲೂ ಸ್ವಯಂಸೇವಕರು ಕೂಡ ಅಗತ್ಯವಾಗಿದೆ. ಹೆಚ್ಚು ಜನ ಸೇರುವಲ್ಲಿ ಸಿಸಿ ಕ್ಯಾಮರಾಗಳನ್ನೂ ಅಳವಡಿಸಬೇಕಾಗುತ್ತದೆ ಡಿವೈಎಸ್ಪಿ ತಿಳಿಸಿದರು.

ಸಮಯ ವಿಸ್ತರಣೆ

ಕಾರ್ಯಕ್ರಮಕ್ಕೆ ಹೆಚ್ಚಿನ ಸಮಯ ನೀಡಬೇಕು ಎಂಬ ಬೇಡಿಕೆ ಜಿಲ್ಲಾ ಮಟ್ಟದ ಸಭೆಯಲ್ಲೂ ಚರ್ಚೆಯಾಗಿದೆ. ಒಂದು ಕಡೆ ನಿಗಧಿತ ಸಮಯಕ್ಕಿಂತ ಹೆಚ್ಚು ಅವಕಾಶ ನೀಡಿದರೆ ದೂರುಗಳು ಬರುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬೇಗನೆ ಆರಂಭಿಸಿ ಸರಿಯಾದ ಸಮಯಕ್ಕೆ ಕಾರ್ಯಕ್ರಮ ಮುಗಿಯುತ್ತದೆ. ಕಳೆದ ಬಾರಿಯ ಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅನುಭವವುಳ್ಳ ಆಯೋಜಕರ ಸಲಹೆ ಅಗತ್ಯವಾಗಿದೆ. ಇಲಾಖೆ ಹಾಗೂ ಆಯೋಜಕರು ನಿಕಟ ಸಂಪರ್ಕ ಇಟ್ಟುಕೊಂಡಾಗ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಮೆರವಣಿಗೆಯ ಕುರಿತು ವಿದ್ಯುತ್, ರಸ್ತೆ, ಇತರ ಮೂಲಸೌಕರ್ಯಗಳ ತೊಂದರೆಗಳಿದ್ದರೆ ಗಮನಕ್ಕೆ ತರುವುದು ಅಗತ್ಯವಾಗಿದೆ. ಉತ್ಸವದ ಕುರಿತು ಹೈಕೋರ್ಟ್ ಆಯೋಜಕರ ಜವಾಬ್ದಾರಿಗಳನ್ನು ಸ್ಪಷ್ಟವಾಗಿ ತಿಳಿಸಿದ್ದು, ಅದಕ್ಕೆ ಸಂಬಂಧಿಸಿ ಎಸ್‌ಒಪಿ ಕೂಡ ಬಂದಿರುತ್ತದೆ. ಅದರ ಪ್ರಕಾರವೇ ಅನುಮತಿಗಳನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದರು. 

ಗಣೇಶೋತ್ಸವ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಮೆರವಣಿಗೆ ರೂಟ್ ಮಾಹಿತಿ ನೀಡಿದರೆ ಅಲ್ಲಿಗೆ ಪೊಲೀಸ್ ವ್ಯವಸ್ಥೆ ಮಾಡಲಾಗುವುದು. ಪೆಂಡಾಲ್ ಭಾಗಕ್ಕೆ ರಸ್ತೆ ವ್ಯವಸ್ಥೆ ಇರಲೇಬೇಕು. ಸೂಕ್ತ ರೀತಿಯ ಪಾರ್ಕಿಂಗ್ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಮೆರವಣಿಗೆ ಸಾಗುವ ಹಾದಿ ಬಗ್ಗೆ ಜಂಟಿ ಸರ್ವೆ ಅಗತ್ಯವಾಗಿದೆ. ಈ ರೂಟ್ ಮಾಹಿತಿಗಳನ್ನು ಮೆಸ್ಕಾಂ ಗಮನಕ್ಕೆ ತರಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು. 

ಸಭೆಯಲ್ಲಿ ಪುತ್ತೂರು ನಗರ ಇನ್ಸ್‌ಪೆಕ್ಟರ್ ಜಾನ್ಸನ್ ಡಿಸೋಜ, ಮಹಿಳಾ ಠಾಣಾ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್, ಸುಳ್ಯ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ್, ವಿವಿಧ ಠಾಣೆಗಳ ಪಿಎಸ್‌ಐಗಳಾದ ಸುರೇಶ್ ಸಿ.ಟಿ., ಉದಯರವಿ, ರಾಮಚಂದ್ರ, ಸೇಸಮ್ಮ, ಈರಯ್ಯ, ಸುಷ್ಮಾ ಭಂಡಾರಿ, ಸುಹಾಸ್ ಆರ್, ಕಂದಾಯ ಇಲಾಖೆಯ ರವಿಕುಮಾರ್, ಮೆಸ್ಕಾಂ, ನಗರಸಭೆ, ಅಗ್ನಿಶಾಮಕ ದಳದ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪಾಲ್ಗೊಂಡಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article