ಗುತ್ತಿಗಾರಿನಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಬಗ್ಗೆ ವಿಶೇಷ ಗ್ರಾಮ ಸಭೆ: ಪಶ್ಚಿಮ ಘಟ್ಟಕ್ಕೂ ಜನ ವಸತಿ ಪ್ರದೇಶಕ್ಕೂ ಗಡಿ ಗುರುತು ಮಾಡಿ ಗ್ರಾಮಸ್ಥರ ಒತ್ತಾಯ
Monday, September 7, 2026
ಸುಬ್ರಮಣ್ಯ: ಮಹಾತ್ಮ ಗಾಂಧಿ ಗುತ್ತಿಗಾರು ಗ್ರಾಮ ಪಂಚಾಯತ್ ವತಿಯಿಂದ ಕಸ್ತೂರಿ ರಂಗನ್ ವರದಿ ಬಗ್ಗೆ ವಿಶೇಷ ಗ್ರಾಮ ಸೆ.7 ರಂದು ಗುತ್ತಿಗಾರಿನ ದೀನ್ ದಯಾಳ್ ರೈತ ಸಭಾ ಭವನದಲ್ಲಿ ನಡೆಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಗುತ್ತಿಗಾರು ಗ್ರಾ.ಪಂ.ನ ಆಡಳಿತಾಧಿಕಾರಿ ದೇವರಾಜ್ ಮುತ್ಲಾಜೆ ವಹಿಸಿದ್ದರು.
ಪಿಡಿಒ ಅಜಿತ್, ಕಾರ್ಯದರ್ಶಿ ಮೋಹನ್ ಕುಮಾರ್ ಕಡ್ತಲ್ ಕಜೆ, ಗುತ್ತಿಗಾರು ಪ್ರಾ.ಕೃ.ಪ.ಸ. ಸಂಘ ಜಯಪ್ರಕಾಶ್ ಮೊಗ್ರ, ಅರಣ್ಯ ಇಲಾಖೆಯ ಸಂತೋಷ್ ದಮ್ಮಸೂರು, ಧರ್ಣಪ್ಪ ಉಪಸ್ಥಿತರಿದ್ದರು.
ಸಭೆಯ ಆರಂಭದಲ್ಲಿ ಕಸ್ತೂರಿ ರಂಗನ್ ವರದಿಯಲ್ಲಿ ಏನೇನು ವಿಷಯ ಅಡಕವಾಗಿದೆ ಎಂದು ಲೊಕೇಶ್ ಪೀರನಮನೆ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ನೂರಾರು ಗ್ರಾಮಸ್ಥರು ಭಾಗವಹಿಸಿದ್ದು ವರದಿ ಭಾದಿತ ನಾಲ್ಕೂರು ಗ್ರಾಮಸ್ಥರು ಅತಿ ಹೆಚ್ಚಿನ ಸಂಖ್ಯೆಯ ಜನರಿದ್ದರು. ಸಭೆಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣ ಕೈ ಬಿಡಲು, ವರದಿಯ ಸಾಧಕ ಭಾದಕ, ಬಫರ್ ಝೋನ್, ಮ್ಯಾನುವಲ್ ಭೂ ಸರ್ವೆ ಮಾಡುವ ಬಗ್ಗೆ, ಸರ್ಕಾರಿ ಭೂಮಿ ಸರ್ಕಾರಿಯಾಗಿ ಉಳಿಯುವಂತೆ, ಸರ್ಕಾರದಿಂದ ಭಾದಿತ ಝೋನ್ ವಿಚಾರವಾಗಿ ಸ್ಪಷ್ಟ ಮಾಹಿತಿ ಕೊಡುವಂತೆ , ಝೀರೋ ಬಫರ್ ಝೋನ್ ಮಾಡುವಂತೆ , ಪಶ್ಚಿಮ ಘಟ್ಟಕ್ಕೂ ಜನ ವಸತಿ ಪ್ರದೇಶಕ್ಕೂ ಪತ್ಯೇಕ ಗಡಿ ಗುರುತು ಮಾಡುವಂತೆ ನಿರ್ಣಯ ಕೈಗೊಳ್ಳಲಾಯಿತು.