Mangalore: ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬೇಡಿ
Friday, December 29, 2023
ಮಂಗಳೂರು: ಮಂಗಳೂರು: ಬರದ ವಿಚಾರದಲ್ಲಿ ರಾಜ್ಯ ಸರ್ಕಾರ ಕೇಂದ್ರವನ್ನ ದೂರುತ್ತಿದೆ. ಅದರ ಬದಲು ರಾಜ್ಯ ಸರ್ಕಾರವೇ ೧೦ ಸಾವಿರ ಕೋಟಿ ರೂ. ಘೋಷಿಸಲಿ, ಕೇಂದ್ರ ಸರ್ಕಾರದ ಜತೆ ನಾವು ನೀವು ಒಟ್ಟಾಗಿ ಮಾತನಾಡೋಣ. ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬೇಡಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವಕರು ಕಾಂಗ್ರೆಸ್‌ಗೆ ಬುದ್ಧಿಮಾತು ಹೇಳಿದ್ದಾರೆ.
ಮಂಗಳೂರಿನ ಜಿಲ್ಲಾ ಬಿಜೆಪಿ ಚುನಾವಣಾ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ವೇಳೆ ಅವರು ಸುದ್ದಿಗಾರರಲ್ಲಿ ಮಾತನಾಡಿದರು.
ಯುವನಿಧಿ ಯೋಜನೆಯಲ್ಲಿ ಪದವಿ ಪಡೆದ ಎಲ್ಲ ನಿರುದ್ಯೋಗಿಗಳಿಗೆ ಹಣ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಈಗ ೨೦೨೨-೨೩ರಲ್ಲಿ ಪದವಿ ಪೂರೈಸಿದ ನಿರುದ್ಯೋಗಿಗಳಿಗೆ ಮಾತ್ರ ಎನ್ನುತ್ತಿದ್ದಾರೆ. ಕರ್ನಾಟಕ ಸರ್ಕಾರ ಆಡಳಿತದಲ್ಲಿ ವಿಫಲವಾಗಿ ಅಸಹಾಯಕವಾಗಿದೆ. ಬರ ನಿರ್ವಹಣೆ, ಕಾನೂನು ಸುವ್ಯವಸ್ಥೆ ಎಲ್ಲ ವಿಚಾರದಲ್ಲಿ ಸರ್ಕಾರ ವಿಫಲವಾಗಿದೆ. ಆರ್‌ಎಸ್‌ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್, ಮೈಸೂರು ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸುವ ವಿಚಾರದಲ್ಲಿ ಸರ್ಕಾರ ಮುಳುಗಿದೆ ಎಂದರು.
ಶಾಸಕ ಬಸನಗೌಡ ಪಾಟೀಳ್ ಯತ್ನಾಳರ ಹೇಳಿಕೆ ಪ್ರಕರಣ ನಮ್ಮ ವರಿಷ್ಠರ ಮುಂದಿದೆ. ಅವರು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ನಾವು ಕಾಯುತ್ತಿದ್ದೇವೆ. ಬಹಳ ದಿನಗಳಿಂದ ಇಂಥದ್ದೆಲ್ಲ ನಡೆಯುತ್ತಿದೆ. ಸದ್ಯದಲ್ಲೇ ಅದೆಲ್ಲಾ ಅಂತ್ಯ ಕಾಣುತ್ತದೆ ಎಂದರು.