Beltangadi: ಸಿರಿ ಸಂಸ್ಥೆಯ ಪ್ರತಿಯೊಂದು ಉತ್ಪನ್ನಗಳಲ್ಲಿಯೂ ಒಂದು ಭಾವನಾತ್ಮಕ ಸಂಬಂಧ ಬೆಸೆದಿದೆ
ಬೆಳ್ತಂಗಡಿ: ಖ್ಯಾತ ಚಲನಚಿತ್ರ ನಟ ಹಾಗೂ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಉತ್ಪನ್ನಗಳ ರಾಯಭಾರಿಯೂ ಆಗಿರುವ ರಮೇಶ್ ಅರವಿಂದ್ ಅವರು ಸಿರಿ ಸಂಸ್ಥೆಯ ಪ್ರಧಾನ ಕಚೇರಿ ಉಜಿರೆಗೆ ಜನವರಿ 26 ರಂದು ಭೇಟಿ ನೀಡಿದರು.
ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್ ಅರವಿಂದ್ ಅವರು, ಹೆಗ್ಗಡೆಯವರು, ಹೇಮಾವತಿ ಅವರ ಮಾರ್ಗದರ್ಶನದಲ್ಲಿ ಹಾಗೂ ಸಿರಿ ಎಂ.ಡಿ. ಕೆ.ಎನ್. ಜನಾರ್ಧನರವರ ಮುಂದಾಳತ್ವದಲ್ಲಿ ನಡೆಯುತ್ತಿರುವ ಈ ಸಿರಿ ಸಂಸ್ಥೆಯಲ್ಲಿ ಉತ್ಪಾದನೆಗೊಳ್ಳುತ್ತಿರುವ ಸಿರಿ ಉತ್ಪನ್ನಗಳಿಗೆ ರಾಯಭಾರಿಯಾಗಿ ಕೆಲಸ ಮಾಡುತ್ತಿರುವುದು ನನಗೆ ಬಹಳ ಹೆಮ್ಮೆಯೆನಿಸುತ್ತಿದೆ ಎಂದು ಹೇಳಿದರು.
ಸಿರಿ ಸಂಸ್ಥೆಯ ಪ್ರತಿಯೊಂದು ಉತ್ಪನ್ನಗಳಲ್ಲಿಯೂ ಒಂದು ಭಾವನಾತ್ಮಕ ಸಂಬಂಧ ಬೆಸೆದಿದೆ. ಯಾಕೆಂದರೆ ಈ ಸಂಸ್ಥೆಯಲ್ಲಿ ಉತ್ಪಾದನೆಗೊಳ್ಳುತ್ತಿರುವ ಪ್ರತೀ ಉತ್ಪನ್ನಗಳಲ್ಲಿಯೂ ಬಡ ಹೆಣ್ಣು ಮಕ್ಕಳ ಪರಿಶ್ರಮ ಅಡಗಿದೆ. ನಾವೆಲ್ಲರೂ ನಮ್ಮ ದಿನಬಳಕೆಗೆ ಸಿರಿ ಉತ್ಪನ್ನಗಳನ್ನು ಉಪಯೋಗಿಸಿದ್ದಲ್ಲಿ ನಮ್ಮ ಸಿರಿ ಸಂಸ್ಥೆಯಲ್ಲಿ ದುಡಿಯುತ್ತಿರುವ ಪ್ರತಿಯೋರ್ವ ಹೆಣ್ಣುಮಕ್ಕಳ ಬಾಳಿನಲ್ಲೂ ಸದಾ ನಗು, ನೆಮ್ಮದಿಯಿಂದ ಕೂಡಿರಲು ಸಹಕಾರಿಯಾಗಲಿದೆ ಎಂದರು.
ಆದುದರಿಂದ ಹೆಗ್ಗಡೆ ಹಾಗೂ ಹೇಮಾವತಿ ಅವರ ಆಸರೆಯಲ್ಲಿ ದುಡಿಯುತ್ತಿರುವ ಎಲ್ಲಾ ಸಿರಿ ಸಿಬ್ಬಂದಿಗಳೂ ಸದಾ ನಗುಮೊಗದಿಂದ ಪರಸ್ಪರ ಪ್ರೀತಿ, ನಂಬಿಕೆ, ವಿಶ್ವಾಸವನ್ನಿಟ್ಟು ಶ್ರದ್ಧೆಯಿಂದ, ಇಷ್ಟಪಟ್ಟು ಸಂಸ್ಥೆಯ ಕೆಲಸಕಾರ್ಯಗಳನ್ನು ನಿರ್ವಹಿಸಿದ್ದಲ್ಲಿ ಖಂಡಿತವಾಗಿಯೂ ಯಶಸ್ಸು ತಮ್ಮೆಲ್ಲರನ್ನೂ ಹರಸಿಕೊಂಡು ಬರಲಿದೆ ಎಂದು ಸಿರಿ ಸಿಬ್ಬಂದಿಗಳಲ್ಲಿ ಸ್ಪೂರ್ತಿ ತುಂಬಿದರು. ಜೊತೆಗೆ ಗಣರಾಜ್ಯೋತ್ಸವ ಸಂಭ್ರಮಾಚರಣೆಯ ಕುರಿತಾಗಿ ತಮ್ಮ ವಿದ್ಯಾರ್ಥಿ ಜೀವನದ ಸಿಹಿ ಅನುಭವಗಳನ್ನು ಹಂಚಿಕೊಂಡರು.
ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ಧನ ಮಾತನಾಡಿ, ಹೆಗ್ಗಡೆ ಮತ್ತು ಹೇಮಾವತಿ ಅವರು ಸಿರಿ ಸಂಸ್ಥೆಯ ಮೇಲೆ ಅಪಾರ ಪ್ರೀತಿ, ಅಭಿಮಾನವನ್ನು ಹೊಂದಿರುವ ರಮೇಶ್ ಅರವಿಂದರವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಸರಳತೆ, ಸಜ್ಜನಿಕೆ ಹಾಗೂ ಮೌಲ್ಯಯುತ ಜೀವನ ಶೈಲಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಎಲ್ಲಾ ಸಿರಿ ಸಿಬ್ಬಂದಿಗಳ ಪರವಾಗಿ ರಮೇಶ್ ಅರವಿಂದರವರನ್ನು ಶಾಲು ಹೊದಿಸಿ, ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿ ಗೌರವಿಸಿದರು.
ಸಿರಿ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕ ರಾಜೇಶ್ ಪೈ, ಸಿರಿ ಸಂಸ್ಥೆಯ ಆಡಳಿತ ಮತ್ತು ಲೆಕ್ಕಪತ್ರ ವಿಭಾಗದ ನಿರ್ದೇಶಕ ಪ್ರಸನ್ನ ಯು. ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸಿರಿ ಗೋದಾಮು ಪ್ರಬಂಧಕರಾದ ಜೀವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ತದನಂತರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ರಮೇಶ್ ಅರವಿಂದರವರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ನಂತರ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದವನ್ನು ಪಡೆದು, ಸಿರಿ ಸಂಸ್ಥೆಯ ಅಭಿವೃದ್ಧಿ ಕುರಿತಾಗಿ ಚರ್ಚಿಸಿದರು.
ಈ ಸಂದರ್ಭದಲ್ಲಿ ರಮೇಶ್ ಅರವಿಂದ ಅವರ ರಾಯಭಾರಿಯಲ್ಲಿ ಸಿರಿ ಸಂಸ್ಥೆಯು ಸಮಗ್ರ ಏಳಿಗೆಯನ್ನು ಕಾಣುತ್ತಿರುವುದಕ್ಕೆ ಹೆಗ್ಗಡೆ ಅವರು ರಮೇಶ್ ಅರವಿಂದರವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.


