Chikkamagaluru: ಸಿ.ಟಿ. ರವಿಯಿಂದ ಏಕಾಂಗಿ ಧರಣಿ

Chikkamagaluru: ಸಿ.ಟಿ. ರವಿಯಿಂದ ಏಕಾಂಗಿ ಧರಣಿ


 ಚಿಕ್ಕಮಗಳೂರು: ಮೂರು ದಶಕಗಳ ಹಿಂದೆ ಬಾಬರಿ ಧ್ವಂಸ ಸಂದರ್ಭ ಹುಬ್ಬಳ್ಳಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಶ್ರೀಕಾಂತ್ ಪೂಜಾರಿ ಎಂಬಾತನನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ಮಾಜಿ ಸಚಿವ ಸಿ.ಟಿ.ರವಿ ’ನಾನೂ ಕರಸೇವಕ, ನನ್ನನ್ನು ಬಂಧಿಸಿ’ ಎಂದು ಬರೆದಿರುವ ಭಿತ್ತಿಪತ್ರ ಹಿಡಿದು ಗುರುವಾರ ಚಿಕ್ಕಮಗಳೂರು ನಗರ ಠಾಣೆ ಎದುರು ಏಕಾಂಗಿ ಧರಣಿ ನಡೆಸಿದರು.

ಕೆಲವು ಕಾರ್ಯಕರ್ತರೊಂದಿಗೆ ಆಗಮಿಸಿದ ಅವರು ಪೊಲೀಸ್ ಠಾಣೆಯ ಮುಂಭಾಗ ’ನಾನು ಕ್ರಿ.ಶ.1992 ಡಿ.6ರ ಅಯೋಧ್ಯೆ ಶ್ರೀರಾಮ ಮಂದಿರದ ಕರಸೇವಕ, ನನ್ನನ್ನೂ ಬಂಧಿಸಿ’ ಎಂಬ ಭಿತ್ತಿಪತ್ರವನ್ನು ಹಿಡಿದು ನಗರ ಪೊಲೀಸ್ ಠಾಣೆ ಮುಂಭಾಗ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು. ಠಾಣೆಯ ಗೇಟ್ ಆವರಣದಲ್ಲಿದ್ದ ಕಾರ್ಯಕರ್ತರು ಸಿ.ಟಿ. ರವಿ ಪ್ರತಿಭಟನೆಗೆ ಸಾಥ್ ನೀಡಿದರು.

ಈ ವೇಳೆ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ವೇಳೆ ಹೆಚ್ಚುವರಿ ಎಸ್ಪಿ ಕೃಷ್ಣ ಮೂರ್ತಿ ಅವರು ಸಿ.ಟಿ. ರವಿಯನ್ನು ಪೋಲಿಸ್ ಠಾಣೆ ಒಳಗೆ ಕರೆದುಕೊಂಡು ಹೋದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ನಾವೂ ಕರ ಸೇವಕರು, ನಮ್ಮನ್ನು ಬಂಧಿಸಿ ಎಂದು ಠಾಣೆಗೆ ಮುತ್ತಿಗೆ ಹಾಕಲು ಮುಂದಾದರು. ಈ ಸಂದರ್ಭ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ, ತಳ್ಳಾಟ, ನೂಕಾಟ ನಡೆಯಿತು. ನಂತರ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಠಾಣೆಯ ಆವರಣದಿಂದ ಹೊರಗೆ ಕಳಿಸಿದರು. ಸಿ.ಟಿ. ರವಿಯನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article