Dharmastala: ಶ್ರೀ ರತ್ನತ್ರಯ ಜೈನ ತೀರ್ಥ ಕ್ಷೇತ್ರದಲ್ಲಿ ಮುನಿಗಳ ಮಂಗಳ ಪ್ರವಚನ

Dharmastala: ಶ್ರೀ ರತ್ನತ್ರಯ ಜೈನ ತೀರ್ಥ ಕ್ಷೇತ್ರದಲ್ಲಿ ಮುನಿಗಳ ಮಂಗಳ ಪ್ರವಚನ


 ಧರ್ಮಸ್ಥಳ: ಬೆಳ್ತಂಗಡಿ ಜೈನ್ ಪೇಟೆಯ ಶ್ರೀ ರತ್ನತ್ರಯ ಜೈನ ತೀರ್ಥ ಕ್ಷೇತ್ರದಲ್ಲಿ ಪ್ರಜ್ಞಾ ಶ್ರಮಣ ಆಚಾರ್ಯ ಶ್ರೀ ದೇವನಂದಿ ಗುರುಗಳ ಪರಮ ಶಿಷ್ಯರಾದ ಶ್ರೀ ಅಮೋಘಕೀರ್ತಿ ಮುನಿಮಹಾರಾಜರು ಹಾಗೂ ಶ್ರೀ ಅಮರಕೀರ್ತಿ ಮುನಿಮಹಾರಾಜರು ಮಂಗಲ ಪ್ರವಚನ ನೀಡಿದರು.

ಶ್ರೀ ಅಮರಕೀರ್ತಿ ಮುನಿಗಳು ಆಶೀರ್ವದಿಸಿ, ತನ್ನನ್ನು ತಾನು ಅರಿತುಕೊಂಡಾಗ ಭಗವಂತನೆಡೆಗೆ ಹಾಗೂ ಗುರುವಿನೆಡೆಗೆ ಸುಲಭವಾಗಿ ತಲುಪಲು ಸಾಧ್ಯ. ತನಗಾಗಿ ಬದುಕದೆ ಇನ್ನೊಬ್ಬರಿಗಾಗಿ ಬದುಕು ಎಂಬುದನ್ನು ಜೈನ ಧರ್ಮ ಸಾರುತ್ತದೆ. ಇನ್ನೊಬ್ಬರ ಏಳಿಗೆ ಬಯಸದೆ ಸದಾ ದೋಷಾರೋಪಣೆ ಮಾಡುತ್ತಾ ಇರುವುದರಿಂದ, ನಿರಂತರ ದಿನ ರಾತ್ರಿ ಇನ್ನೊಬ್ಬರ ಕಡೆಗೆ ಗಮನ ನೀಡುವುದರಿಂದ ಏಳಿಗೆ ಸಾಧ್ಯವಿಲ್ಲ. ತನ್ನನ್ನು ತಾನು ತಿಳಿದುಕೊಂಡರೆ ನಮ್ಮ ಕೊರತೆಗಳು ಕಾಣುತ್ತವೆ. ಮನಸ್ಸಿನಲ್ಲಿ ಮೂಡಿದ ವಿಚಾರಗಳ ಬಗ್ಗೆ ಗಮನಕೊಟ್ಟಾಗ ಆತ್ಮದ ಉನ್ನತಿಯಾಗುತ್ತದೆ ಎಂದು ಹೇಳಿದರು.

ಇಂದು ಜನರಿಗೆ ಹಳೆಯ ವಸ್ತುಗಳು ಇಷ್ಟವಾಗುವುದಿಲ್ಲ. ಹೊಸ ಮೊಬೈಲ್, ಮನೆ, ಬಟ್ಟೆ ಎಲ್ಲರಿಗೂ ಬೇಕು. ಆದರೆ ಹೊಸ ವಿಚಾರಗಳು ಮಾತ್ರ ಬೇಡ. ಅರೆ ಬಟ್ಟೆಯಲ್ಲಿ ಸುತ್ತಾಡುವುದು, ನೆಲದಲ್ಲಿ ಕುಳಿತು ಊಟಮಾಡುವ ಬದಲು ಹೋಟೆಲಿನಲ್ಲಿದ್ದಂತೆ ಊಟ ಮಾಡುವುದು, ಮನೆಯಲ್ಲಿನ ಹಿರಿಯರನ್ನು ಗೌರವ ರಹಿತವಾಗಿ ಮಾತನಾಡುವ ಪರಿಪಾಠ ಬೆಳೆಯುತ್ತಿರುವುದು ವಿಷಾದನೀಯ ಎಂದ ಅವರು ನಾವು ಈ ಶರೀರಕ್ಕೋಸ್ಕರ ಅನೇಕ ತರಹದ ಉಪಚಾರಗಳನ್ನು ಮಾಡುತ್ತೇವೆ. ಆದರೆ ಅದು ಕೊನೆಗೆ ನಮ್ಮನ್ನು ಮೋಸ ಮಾಡುತ್ತದೆ. ಅದು ಯಾರಿಗೂ ಬೇಡದ ವಸ್ತುವಾಗಿ ಹೋಗುತ್ತದೆ ಎಂದು ಗೊತ್ತಿದ್ದರೂ ನಾವು ಶರೀರದ ಹಿಂದೆಯೇ ನಮ್ಮ ಸಂಪೂರ್ಣ ಜೀವನವನ್ನು ವ್ಯಯಿಸುತ್ತಿದ್ದೇವೆ. ವ್ಯಕ್ತಿ ಎಷ್ಟೇ ಶ್ರೇಷ್ಠನಾಗಿದ್ದರೂ ಆತನು ಮಾಡಿದ ಒಂದೇ ಒಂದು ಕೆಟ್ಟ ವರ್ತನೆ ಜೀವನವನ್ನೇ ನಷ್ಟ ಮಾಡಿ ಬಿಡುತ್ತದೆ ಎಂದು ವಿಶ್ಲೇಷಿಸಿದರು.

ವಿದೇಶಿ ಸಂಸ್ಕೃತಿಯ ಹೊಸ ವರ್ಷಾಚರಣೆಯನ್ನು ನಾವು ಮಾಡುತ್ತಿದ್ದೇವೆ. ಆದರೂ ಭಾರತೀಯ ಸಂಸ್ಕೃತಿಯನ್ನು ನಾನು ಕರ್ನಾಟಕದಲ್ಲಿ ಕಾಣುತ್ತಿದ್ದೇನೆ. ಒಂದೆಡೆ ವಿಜ್ಞಾನ ಆಕಾಶದೆತ್ತರಕ್ಕೆ ಬೆಳೆದಿದೆ, ಇನ್ನೊಂದೆಡೆ ಜೈನ ಮುನಿಗಳು ಆಧ್ಯಾತ್ಮಿಕತೆಯನ್ನು ನಭಕ್ಕೇರಿಸುತ್ತಿದ್ದಾರೆ ಎಂದರು.

ಶ್ರೀ ಅಮೋಘಕೀರ್ತಿ ಮಹಾರಾಜರು ತಮ್ಮ ಪ್ರವಚನದಲ್ಲಿ ನಾವು ದಿನದಲ್ಲಿ ಎಷ್ಟು ಹೊತ್ತು ಧರ್ಮಚಿಂತನೆ ಮಾಡುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ನಾವು ೧೮ ಗಂಟೆ ಮಾತನಾಡುತ್ತೇವೆಯೆಂದಾದರೆ ಅದರಲ್ಲಿ ಧರ್ಮ ವಿಚಾರಗಳು ಎಷ್ಟಿವೆ? ಧರ್ಮಮಯ ವಾತಾವರಣದಲ್ಲಿ ಇರುವುದು ನಮಗೆ ಇಷ್ಟವೇ ಇಲ್ಲವಾಗಿದೆ. ಅನ್ಯಥಾ ಮಾತನಾಡುವುದರಿಂದಲೂ ಪಾಪಕರ್ಮಗಳು ಹೆಚ್ಚಾಗುತ್ತವೆ. ೨೦೨೩ ರಲ್ಲಿ ನಮ್ಮ ಹಣದ ವಹಿವಾಟು ಎಷ್ಟಾಯಿತು ಎಂದು ಲೆಕ್ಕಹಾಕುತ್ತೇವೆಯೇ ಹೊರತು ನಾನು ಮಾಡಿರುವ ಪಾಪಕರ್ಮಗಳ ಲೆಕ್ಕ ಮಾಡುವುದೇ ಇಲ್ಲ. ಈ ಶರೀರದಲ್ಲಿ ಎಲ್ಲಿಯ ತನಕ ಆತ್ಮ ಇರುತ್ತದೆಯೋ ಅಲ್ಲಿಯವರೆಗೆ ನಮಗೆ ವಿಧವಿಧವಾದ ಗೌರವ ಸಿಗುತ್ತದೆ. ಆದರೆ ಆತ್ಮ ಹೊರಟಾಗ ಅದು ಕೇವಲ ಡೆಡ್‌ಬಾಡಿ ಎಂದ ಅವರು ಧರ್ಮ ಇದ್ದಲ್ಲಿ ಬೆಳಕು. ಭೋಗವಿಲಾಸದಿಂದ ನಮ್ಮ ಜೀವನ ಇದ್ದಿಲಿನ ಹಾಗೆ ಆಗುತ್ತದೆಯೇ ಹೊರತು ಚಿನ್ನವಾಗುವುದಿಲ್ಲ. ನನ್ನದು ನನ್ನದೇ, ಆದರೆ ಇನ್ನೊಬ್ಬರದೂ ನನ್ನದೇ ಎನ್ನುವುದು ದುರ್ಯೋಧನನ ನೀತಿಯಾಗಿತ್ತು. ಆದರೆ ನಿನ್ನದು ನಿನ್ನದೆ, ನನ್ನದೂ ನಿನ್ನದೇ ಎನ್ನುವುದು ರಾಮನ ನೀತಿಯಾಗಿತ್ತು. ಆದರೆ ನನ್ನದು, ನಿನ್ನದೂ ಯಾವುದೂ ಇಲ್ಲ ಎಲ್ಲವೂ ಭಗವಂತನದೇ ಎನ್ನುತ್ತದೆ ಜೈನ ಧರ್ಮ ಎಂದ ಅವರು ಹೊಸ ವರ್ಷದಲ್ಲಿ ಎಲ್ಲರೂ ಸಕಾರಾತ್ಮಕ ಸಂಕಲ್ಪಗಳನ್ನು ಮಾಡಿಕೊಳ್ಳುವಂತೆ ಆಶೀರ್ವದಿಸಿದರು.

ಕರ್ನಾಟಕದಲ್ಲಿ ಜೈನ ಪರಂಪರೆ ಸಧೃಡವಾಗಿದೆ. ನನಗೆ ಇಲ್ಲಿನ ಜೈನರ ನಡವಳಿಕೆ, ಆಚಾರ ವಿಚಾರಗಳ ಬಗ್ಗೆ ಹೆಮ್ಮೆ ಇದೆ. ಇದನ್ನು ಯಾರೋ ಉತ್ತರ ಭಾರತದವರು ಬಂದು ಬದಲಾವಣೆಗೆ ಪ್ರಯತ್ನಿಸುವುದು ಸರಿಯಲ್ಲ. ಇಲ್ಲಿನ ಜೈನ ಸಮಾಜವನ್ನು ವಿಘಟನೆಗೊಳ್ಳಲು ಬಿಡಬಾರದು. ಜೈನರಲ್ಲಿ ಮತ್ತೆ ಹೊಸ ಪಂಗಡದ ಸೃಷ್ಟಿಯಾಗಬಾರದು. ನೀತಿ, ಆಧ್ಯಾತ್ಮ, ಧರ್ಮ ಇವು ನಮ್ಮ ಜೀವನದ ಗುರಿಯಾಗಿರಲಿ ಎಂದು ಸಲಹೆ ನೀಡಿದರು.

ಜಯವರ್ಮರಾಜ ಬಲ್ಲಾಳ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ ರಾಜವೀರ ಇಂದ್ರ ಸ್ವಾಗತಿಸಿದರು. ವಕೀಲ ಶಶಿಕಿರಣ್ ಜೈನ್ ವಂದಿಸಿ, ಶಿಕ್ಷಕ ಧರಣೇಂದ್ರ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

ಮುನಿಗಳ ಪ್ರವಚನಕ್ಕೆ ಮೊದಲು ಸರ್ವೇಶ್ ಜೈನ್-ಸೌಮ್ಯ ಜೈನ್ ಮೂಡಬಿದ್ರೆ ಅವರಿಂದ ಜಿನಗೀತೆ ಸಂಗೀತ ಸುಧೆ ಪ್ರಸ್ತುತಗೊಂಡಿತು. ಇದೇ ವೇಳೆ ಶ್ರಿ ಪಾವನಕೀರ್ತಿ ಮಹಾರಾಜರು ಆಗಮನವಾಗಿದ್ದು, ಅವರನ್ನು ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article