Mangalore: ಎನ್.ಹೆಚ್. 169 ಕಾರ್ಕಳ-ವಾಮಂಜುರು ರಸ್ತೆಯ ಕಾಮಗಾರಿ ವಿಳಂಬ-ಸಂಚಾರಕ್ಕೆ ತೊಂದರೆ ಅನುಭವಿಸುತ್ತಿರುವ ಘನವಾಹನಗಳು
ಮಂಗಳೂರು: ಬಿಕರ್ನಕಟ್ಟೆ, ವಾಮಂಜೂರು ರಸ್ತೆಯಿಂದ ಪೊಳಲಿ ಅಡ್ಡೂರು ಮಾರ್ಗವಾಗಿ ಕಾರ್ಕಳಕ್ಕೆ ತೆರಳುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸುವ ಯೋಜನೆಯು ಸುಮಾರು ಹತ್ತು ವರ್ಷಗಳ ಹಿಂದೆಯೇ ಮಾಡಲಾಗಿದ್ದು, ರಾಜ್ಯದ ಪ್ರವಾಸಿ ಕೇಂದ್ರಗಳಲ್ಲೊಂದಾದ ಪಿಲಿಕುಳ ನಿಸರ್ಗಧಾಮಕ್ಕೆ ತೆರಳಲು ಈ ರಾಷ್ಟ್ರೀಯ ಹೆದ್ದಾರಿಯನ್ನೇ ಬಳಸಬೇಕಾಗಿದೆ. ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಈ ಜಂಕ್ಷನ್‌ನಲ್ಲಿ ರಸ್ತೆ ಕಿರಿದಾಗಿದ್ದು, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು, ಅತಿ ಹೆಚ್ಚು ಅಪಘಾತ ಸಂಭವಿಸುವ ಅಪಾಯಕಾರಿ ರಸ್ತೆ ಎಂಬ ಖ್ಯಾತಿಯನ್ನೂ ಪಡೆದಿದೆ.
ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆಗಾಲದಲ್ಲಿ ರಸ್ತೆಯಲ್ಲೇ ನೀರು ನಿಲ್ಲುವುದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಮಂಗಳಜ್ಯೋತಿ ಮತ್ತು ವಾಮಂಜೂರು ಸುತ್ತ-ಮುತ್ತಲಿನ ಪ್ರದೇಶದಲ್ಲಿ ಶಾಲಾ-ಕಾಲೇಜುಗಳಿರುವುರಿಂದ ವಾಹನ ದಟ್ಟಣೆಯೂ ಹೆಚ್ಚಾಗಿದ್ದು, ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ರಸ್ತೆ ದಾಟಲು ಪ್ರತಿನಿತ್ಯ ಪರದಾಡಬೇಕಾಗಿದೆ.
ಯಕ್ಷ ಪ್ರಶ್ನೆಯಾದ ಪರಿಹಾರಧನ ವಿತರಣೆ:
ಈ ವಿಚಾರದಲ್ಲಿ ಸರ್ಕಾರ ರಸ್ತೆ ಕಾಮಗಾರಿ ಪ್ರಾರಂಭಿಸುವ ಮುನ್ನ ರಸ್ತೆ ಬದಿಯಿರುವ ಮನೆ ಮತ್ತು ಅಂಗಡಿಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಗಿತ್ತು. ಅಲ್ಲದೇ ಪರವಾನಗಿ ಹೊಂದಿರುವ ಅಂಗಡಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅರ್ಜಿ ಸಲ್ಲಿಸಿದ ವ್ಯಾಪಾರಸ್ಥರಿಗೆ ಸೂಕ್ತ ಪರಿಹಾರ ಧನವನ್ನು ವಿತರಿಸಲಾಗಿದ್ದು, ಪರವಾನಗಿ ಹೊಂದಿಲ್ಲದ ವ್ಯಾಪಾರಸ್ಥರು ಅರ್ಜಿ ಸಲ್ಲಿಸದ ಕಾರಣ ನೆರವು ಯಕ್ಷ ಪ್ರಶ್ನೆಯಾಗಿದೆ. ಮತ್ತೊಂದೆಡೆ ರಸ್ತೆಯ ಎರಡು ಬದಿಯಲ್ಲೂ ಗೂಡಂಗಡಿ, ತಳ್ಳುವ ವಾಹನಗಳಲ್ಲಿ ಅಂಗಡಿಗಳನ್ನು ಹಾಕಿಕೊಂಡಿದ್ದು, ಇಲ್ಲಿಯ ತನಕ ತೆರವಾಗದ ಅಂಗಡಿಗಳಿಂದ ರಸ್ತೆ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ.
ಅರಣ್ಯ ಇಲಾಖೆಯಿಂದ ಸಿಗದ ಅನುಮತಿ:
ವ್ಯಾಪಾರಸ್ಥರು ಪರಿಹಾರ ಸಿಗದೆ ಅಂಗಡಿ ತೆರವುಗೊಳಿಸಲು ನಿರಾಕರಿಸುವುದರಿಂದ ಕಾಮಗಾರಿ ಕೆಲಸದಲ್ಲಿ ವಿಳಂಬವಾಗಿದೆ. ಗುರುಪುರ ಭಾಗದಲ್ಲಿ ಅನೇಕ ದೇವಾಲಯಗಳಿರುವುದರಿಂದ ತೆರವುಗೊಳಿಸುವುದು ಸರ್ಕಾರಕ್ಕೆ ಕಷ್ಟ ಸಾಧ್ಯವಾಗಿದ್ದು, ರಸ್ತೆ ಬದಿಯ ಮರ-ಗಿಡಗಳನ್ನು ಕಡಿಯಲು ಅರಣ್ಯ ಇಲಾಖೆಗೆ ಅನುಮತಿ ನೀಡುವಂತೆ ಕೋರಲಾಗಿದೆ. ಅರಣ್ಯ ಇಲಾಖೆ ಇದುವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿರುವುದು ಈ ಭಾಗದ ರಸ್ತೆ ಅಗಲೀಕರಣ ಪ್ರಕ್ರಿಯೆ ಮತ್ತಷ್ಟು ವಿಳಂಬಕ್ಕೆ ಕಾರಣವಾಗಿದೆ.
ಪರಿಹಾರ ಧನ ನೀಡಲು ಒಪ್ಪದ ಕೇಂದ್ರ ಸರ್ಕಾರದ ನೀತಿಯನ್ನು ಬೀದಿ ಬದಿ ವ್ಯಾಪಾರಸ್ಥರು ವಿರೋಧಿಸುತ್ತಿರುವುದು ಹಾಗೂ ಅಂಗಡಿಗಳನ್ನು ತೆರವುಗೊಳಿಸದಿರುವುದು, ಮಾತ್ರವಲ್ಲದೇ, ಸಾಕಷ್ಟು ಜನರು ಸೂಕ್ತ ಪರಿಹಾರ ಸಿಗದೆ ತಮ್ಮ ಜಾಗವನ್ನು ಬಿಟ್ಟುಕೊಡಲು ಹಿಂದೇಟು ಹಾಕುವುದು ಮಾತ್ರವಲ್ಲ ಸಾಕಷ್ಟು ಪ್ರತಿಭಟನೆಗಳು ನಡೆದಿರುವುದು ಒಂದು ಮುಖ್ಯ ಕಾರಣ. ಇದೆಲ್ಲದರ ನಡುವೆ ಕೇಂದ್ರ ಸರಕಾರ ಪರಿಹಾರ ಧನ ಬಿಡುಗಡೆಗೊಂಡಲ್ಲಿ ಈ ಎಲ್ಲಾ ಸಮಸ್ಯೆಗಳು ಬಗೆಹರಿದು ಕಾಮಗಾರಿ ಸರಳವಾಗಿ ನಡೆಸಲು ಸಹಕಾರಿಯಾಗಲಿದೆ.
ಮುಂಬರುವ ಚುನಾವಣೆ ನಂತರ ಸರ್ಕಾರ ಬದಲಾಗುವ ಸಾಧ್ಯತೆ ಇರಬಹುದೆಂದು ಈಗಿನ ಸರ್ಕಾರ ತಮಗೆ ಅನುಕೂಲಕರವಾದ ರಸ್ತೆಯ ಕಾಮಗಾರಿ ನಡೆಸುತ್ತಿದೆ. ಆದರೆ ವಾಮಂಜೂರು ವಲಯದ ರಸ್ತೆ ಕಾಮಗಾರಿ ಇನ್ನೂ ನಡೆದಿಲ್ಲ. -ಲೋಕೇಶ್, ಅಧ್ಯಕ್ಷರು, ರಿಕ್ಷಾಚಾಲಕರ ಸಂಘ, ವಾಮಂಜೂರು
ರಸ್ತೆ ಕಾಮಗಾರಿ ಈಗಾಗಲೇ ಪೂರ್ಣಗೊಳ್ಳಬೇಕಿತ್ತು. ಬೀದಿಬದಿ ವ್ಯಾಪಾರಿಗಳು ಸ್ಥಳಾಂತರಿಸದ ಕಾರಣದಿಂದಾಗಿ ಕಾಮಗಾರಿ ಸ್ಥಗಿತಗೊಂಡಿದೆ. ವ್ಯಾಪಾರಸ್ಥರು ಸರಕಾರದ ಸೂಚನೆ ಪಾಲಿಸಿದರೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳ್ಳುತ್ತದೆ. -ಹೇಮಲತಾ, ಕಾರ್ಪೋರೇಟರ್, ಮಂಗಳೂರು ಮಹಾನಗರಪಾಲಿಕೆ.
ವರದಿ: ಮೇಘನ ಎಂ., ವೈಶಾಲಿ, ಪ್ರಿಯಾ, ವರುಣ್
ದ್ವಿತೀಯ ಬಿಎ, ಪತ್ರಿಕೋದ್ಯಮ ವಿಭಾಗ
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು
