Mangalore:  ಜ.26: ಜಿಲ್ಲಾ ಮಟ್ಟದ ದೇವಸ್ಥಾನ ಪರಿಷತ್ತು

Mangalore: ಜ.26: ಜಿಲ್ಲಾ ಮಟ್ಟದ ದೇವಸ್ಥಾನ ಪರಿಷತ್ತು


ಮಂಗಳೂರು: ತೆಂಕಕಾರಂದೂರಿನ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ರೆಖ್ಯ-ಗುಡ್ರಾದಿಯ ಶ್ರೀ ಗುಡ್ರಾಮಲ್ಲೇಶ್ವರ ದೇವಸ್ಥಾನ, ಹಿಂದು ಜನಜಾಗೃತಿ ಸಮಿತಿ ಮತ್ತು ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಂಯುಕ್ತ ಆಶ್ರಯದಲ್ಲಿ ಜ.26 ರಂದು ಬೆಳಗ್ಗೆ 10ರಿಂದ ಸಂಜೆ 6.30ರವರೆಗೆ ಮಂಗಳೂರಿನ ಕಾರ್‌ಸ್ಟ್ರೀಟ್ ಶ್ರೀ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ‘ಜಿಲ್ಲಾ ಮಟ್ಟದ ದೇವಸ್ಥಾನ ಪರಿಷತ್ತು’ ಆಯೋಜಿಸಲಾಗಿದೆ.

ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಶ್ರೀಹರಿನಾರಾಯಣದಾಸ ಅಸ್ರಣ್ಣ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ 300ಕ್ಕಿಂತ ಹೆಚ್ಚು ಆಮಂತ್ರಿತ ದೇವಸ್ಥಾನಗಳ ವಿಶ್ವಸ್ಥರು, ಅರ್ಚಕರು, ಪುರೋಹಿತರು, ಪ್ರತಿನಿಧಿಗಳು, ದೇವಸ್ಥಾನಗಳ ರಕ್ಷಣೆಗಾಗಿ ಹೋರಾಡುವ ವಕೀಲರು, ಧಾರ್ಮಿಕ ಚಿಂತಕರು ಭಾಗವಹಿಸುವರು ಎಂದು ‘ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ದ ಸಂಯೋಜಕ ಮೋಹನ ಗೌಡ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇತ್ತೀಚೆಗೆ ದೇವಸ್ಥಾನಗಳ ಮೇಲೆ ವಿವಿಧ ರೀತಿಯ ಆಕ್ರಮಣಗಳು ನಡೆಯುತ್ತಿವೆ. ದೇವಸ್ಥಾನಗಳ ಸರಕಾರಿಕರಣ, ದೈವಸ್ಥಾನಗಳನ್ನು ಅಪವಿತ್ರಗೊಳಿಸುವುದು, ಮೂರ್ತಿಭಂಜನ, ಅನಧಿಕೃತವೆಂದು ದೇವಸ್ಥಾನಗಳನ್ನು ಧ್ವಂಸಗೊಳಿಸುವುದು, ದೇವಸ್ಥಾನಗಳ ಜಮೀನುಗಳ ಲೂಟಿ, ದೇವನಿಧಿ ಅಪವ್ಯಯ, ಮುಂತಾದ ಸಮಸ್ಯೆಗಳಿವೆ. ದೇವಸ್ಥಾನಗಳ ದೇವತಾತತ್ತ್ವವನ್ನು ಕಾಪಾಡಲು, ದೇವಸ್ಥಾನಗಳಲ್ಲಿ ಧರ್ಮಪ್ರಸಾರ ಮಾಡಲು, ಭಕ್ತಾದಿಗಳಿಗೆ ಮೂಲ ಸೌಕರ್ಯ ಕಲ್ಪಿಸಲು, ದೇವಸ್ಥಾನಗಳ ಸಂಘಟನೆ ಮಾಡಲು, ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಯನ್ನು ಅಳವಡಿಸಲು ಪರಿಷತ್ತಿನಲ್ಲಿ ಚರ್ಚೆ, ಚಿಂತನೆ ನಡೆಯಲಿದೆ ಎಂದರು.

ದೇವಸ್ಥಾನಗಳನ್ನು ಸನಾತನ ಧರ್ಮಪ್ರಸಾರ ಕೇಂದ್ರಗಳನ್ನಾಗಿಸುವುದು, ಗುರುಕುಲ, ಗೋಶಾಲೆ ಸ್ಥಾಪನೆ, ಅನ್ಯಮತೀಯರಿಂದ ದೇವಸ್ಥಾನಗಳ ಭೂಮಿಯ ಅತಿಕ್ರಮಣ ಮತ್ತು ಸರಕಾರವು ದೇವಸ್ಥಾನಗಳನ್ನು ವಶಪಡಿಸಿಕೊಳ್ಳುವುದರ ವಿರುಧ್ಧ ಪರಿಹಾರೋಪಾಯ, ದೇವಸ್ಥಾನ ಮತ್ತು ತೀರ್ಥಕ್ಷೇತ್ರಗಳ ಪರಿಸರದಲ್ಲಿ ಮದ್ಯ-ಮಾಂಸ ನಿಷೇಧ, ದುರ್ಲಕ್ಷಿತ ದೇವಸ್ಥಾನಗಳ ಜೀರ್ಣೋದ್ಧಾರ ಮುಂತಾದ ವಿಷಯಗಳ ಕುರಿತೂ ಚರ್ಚೆ ನಡೆಯಲಿದೆ. ಆಮಂತ್ರಿತರಿಗೆ ಮಾತ್ರ ಪ್ರವೇಶ ಎಂದು ವಿವರಿಸಿದರು.

ಕೊಲ್ಯ ಮೂಕಾಂಬಿಕಾ ದೇವಸ್ಥಾನದ ವಿಶ್ವಸ್ಥ ಮಧುಸೂದನ ಆಯರ್, ಬಂಟ್ವಾಳದ ತಿರುಮಲ ವೆಂಕಟರಮಣ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಅಶೋಕ್ ಶೆಣೈ, ರೆಖ್ಯ ಗುಡ್ರಾದಿ ಗುಡ್ರಾಮಲ್ಲೇಶ್ವರ ದೇವಸ್ಥಾನದ ಸಂಚಾಲಕ ಬಾಲಕೃಷ್ಣ ಗೌಡ, ನೀರೆಶ್ವಾಲ್ಯ ಹೊಯ್ಗೆ ಬಜಾರ್ ದೇವಸ್ಥಾನದ ಅಧ್ಯಕ್ಷ ಮಧುಕರ ಉಪಸ್ಥಿತರಿದ್ದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article