Mangalore: ಮೆಸ್ಕಾಂನಲ್ಲಿ ಗಣರಾಜ್ಯೋತ್ಸವ
ವಿದ್ಯುತ್ ಸುರಕ್ಷತೆ ಮತ್ತು ವಿದ್ಯುತ್ ಜಾಗೃತಿಗೆ ಸೈಕಲ್ ಮತ್ತು ಇವಿ ಬೈಕ್ ರ್ಯಾಲಿ
ಮಂಗಳೂರು: ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಡಿ. ಅವರು ಮೆಸ್ಕಾಂ ಪ್ರಧಾನ ಕಚೇರಿ ಆವರಣದಲ್ಲಿ ೭೫ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಧ್ವಜಾರೋಹಣ ನೆರವೇರಿಸಿದರು.
ಬಳಿಕ ಅವರು ಮಾತನಾಡಿ, ಸಂವಿಧಾನ ರಚನೆಯ ಹಿನ್ನಲೆಯನ್ನು ವಿವರಿಸಿದ ಅವರು ಭಾರತದ ನಾಗರಿಕರಿಗೆ ದಾರಿ ದೀಪದಂತಿರುವ ಅತ್ಯದ್ಭುತ ಸಂವಿಧಾನ ನಮ್ಮದು. ವಿಶ್ವ ಮಾನ್ಯತೆ ಪಡೆದ ನಮ್ಮ ಸಂವಿಧಾನ, ಭಾರತದಲ್ಲಿ ಸಮಾನತೆಯನ್ನು ಸಾಕಾರಗೊಳಿಸುವಲ್ಲಿ ಒಂದು ಮೈಲಿಗಲ್ಲಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ನಮ್ಮ ಸಂವಿಧಾನ ರಚನಾಕಾರರನ್ನು ಇಂದು ನಾವು ನೆನಪಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಮೆಸ್ಕಾಂ ಅಸ್ತಿತ್ವಕ್ಕೆ ಬಂದು 23 ವರ್ಷಗಳು ಸಂದಿದೆ ಆರಂಭದಿಂದಲೇ ಉತ್ತಮವಾಗಿ ಹೆಸರು ಗಳಿಸಿರುವ ಮೆಸ್ಕಾಂ ಇಂದು ದೇಶದಲ್ಲಿಯೇ ಒಂದು ಉತ್ತಮ ವಿದ್ಯುತ್ ವಿತರಣಾ ಕಂಪೆನಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದ ಅವರು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗದ ನಿರ್ದೇಶನಗಳನ್ನು ಪಾಲಿಸುವತ್ತ ಹೆಚ್ಚಿನ ಗಮನ ಹರಿಸಿ ಗ್ರಾಹಕರ ಆದ್ಯತೆಗಳನ್ನು ಪೂರೈಸುವಲ್ಲಿ ಶ್ರಮವಹಿಸಬೇಕೆಂದು ಸಹೋದ್ಯೋಗಿಗಳಿಗೆ ಕರೆ ನೀಡಿದರು.
ಗ್ಲೋಬಲ್ ವಾರ್ನಿಂಗ್ ಬಗ್ಗೆ ಮಾಹಿತಿ ಹಂಚಿಕೊಂಡ ವ್ಯವಸ್ಥಾಪಕ ನಿರ್ದೇಶಕರು, ನವೀಕರಿಸಬಹುದಾದ ಇಂಧನಗಳನ್ನು ಬಹುವಾಗಿ ಬಳಸಲು ಸರ್ಕಾರಗಳು ಉತ್ತೇಜನ ನೀಡುತ್ತಿದ್ದು, ಸರ್ಕಾರದ ಸಹಾಯಧನ ಪಡೆದು ಹೆಚ್ಚಿನ ರೀತಿಯಲ್ಲಿ ಬಳಸಬೇಕಾಗಿದೆ ಮತ್ತು ವಾಯುಮಾಲಿನ್ಯ ಮತ್ತು ಗ್ಲೋಬಲ್ ವಾರ್ನಿಂಗ್ ತಡೆಗಟ್ಟುವಲ್ಲಿ ಹಸಿರು ಇಂಧನ ಬಳಸುವಂತೆ ಉತ್ತೇಜಿಸಬೇಕಾಗಿದೆ ಮಾತ್ರವಲ್ಲ ಈ ಬಗ್ಗೆ ಮೆಸ್ಕಾಂ ವತಿಯಿಂದ ಜಾಗೃತಿ ಮೂಡಿಸುವ ಕಾರ್ಯಮಾಡಬೇಕಾಗಿದೆ ಎಂದರು.
ಪವರ್ಮೆನ್ಗಳ ಸೇವೆಯನ್ನು ಶ್ಲಾಘಿಸಿದ ಅವರು ಮೆಸ್ಕಾಂನ ವಿದ್ಯುತ್ ಜಾಲವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಿ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ನೀಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿರುತ್ತಾರೆ. ಇದೇ ಸಂದರ್ಭದಲ್ಲಿ ಸುರಕ್ಷತೆಯ ಬಗ್ಗೆ ಪವರ್ಮೆನ್ಗಳು ನಿರ್ಲಕ್ಯ ತೋರುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ಮೆಸ್ಕಾಂ ಉದ್ಯೋಗಿಗಳ ಮಕ್ಕಳಿಗೆ ನಗದು ಪುರಸ್ಕಾರ ಮತ್ತು ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು. ನಂತರ ಮೆಸ್ಕಾಂ ವತಿಯಿಂದ, ವಿದ್ಯುತ್ ಉಳಿತಾಯ ಮತ್ತು ವಿದ್ಯುತ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಯೋಜಿಸಲಾಗಿದ್ದ ಸೈಕಲ್ ಜಾಥಾ ಮತ್ತು ಇವಿ ವಾಹನಗಳ ಜಾಥಾವನ್ನು ಉದ್ಘಾಟಿಸಿದರು. ಈ ಜಾಥಾದಲ್ಲಿ ಮೆಸ್ಕಾಂನ ಉದ್ಯೋಗಿಳು, ಕುಟುಂಬಸ್ಥರು ಮತ್ತು ಸಾರ್ವಜನಿಕರು ಭಾಗವಹಿಸಿದರು. ಸುಮಾರು 10 ಕಿ.ಮೀ ನಗರದಲ್ಲಿ ಕ್ರಮಿಸಿ, ಮೆಸ್ಕಾಂ ಆಡಳಿತ ಕಚೇರಿ ಆವರಣದಲ್ಲಿ ಮುಕ್ತಾಯಗೊಂಡಿತು.
ತಾಂತ್ರಿಕ ನಿರ್ದೇಶಕ ಹೆಚ್.ಜಿ. ರಮೇಶ್, ಮುಖ್ಯ ಆರ್ಥಿಕ ಅಧಿಕಾರಿ ಮೌರಿಸ್ ಡಿ’ಸೋಜಾ, ಆರ್ಥಿಕ ಸಲಹೆಗಾರ ಹರಿಶ್ಚಂದ್ರ, ಪ್ರಧಾನ ವ್ಯವಸ್ಥಾಪಕ ಅಭಿಷೇಕ್. ವಿ, ಮುಖ್ಯ ಇಂಜಿನಿಯರ್ (ವಿ) ಪುಷ್ಪಾ ಹಾಗೂ ಮೆಸ್ಕಾಂ ಜಾಗೃತದಳದ ಆರಕ್ಷಕ ಉಪಾಧೀಕ್ಷಕ ಟಿ.ಆರ್. ಜೈಶಂಕರ್ ಉಪಸ್ಥಿತರಿದ್ದರು.
ರಘುರಾಮ್ ಶೆಟ್ಟಿ ಸ್ವಾಗತಿಸಿ, ವಸಂತ ಶೆಟ್ಟಿ ಸಾರ್ವಜನಿಕ ಸಂಪರ್ಕಾಧಿಕಾರಿ ಕಾರ್ಯಕ್ರಮ ನಿರೂಪಿಸಿದರು.



