Moodubidire: ಸೌಹಾರ್ದತೆಯೊಂದಿಗೆ ಮಾನವ ಸರಪಳಿಯಾಗಲಿ: ಚಾರುಕೀರ್ತಿ ಸ್ವಾಮೀಜಿ

Moodubidire: ಸೌಹಾರ್ದತೆಯೊಂದಿಗೆ ಮಾನವ ಸರಪಳಿಯಾಗಲಿ: ಚಾರುಕೀರ್ತಿ ಸ್ವಾಮೀಜಿ


ಮೂಡುದಿರೆ: ಊರಿನಲ್ಲಿ ದೇವಸ್ಥಾನಗಳಲ್ಲಿ ನಡೆಯುವ ಜಾತ್ರೆ, ಗರಡಿ, ದೈವಸ್ಥಾನಗಳಲ್ಲಿ ನಡೆಯುವ ನೇಮೋತ್ಸವ ಹೀಗೆ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಮುಸ್ಲಿಂ ಕುಟುಂಬದ ಕೊಡುಗೆ ಹಿಂದೆ ಇತ್ತು. ಜಗತ್ತು ಶ್ರೀಮಂತವಾಗಿ ಬೆಳೆಯಬೇಕಾದರೆ ನಮ್ಮ ಸ್ವಾರ್ಥ, ಒಳ ಜಗಳವನ್ನು ಬಿಟ್ಟು ಮುಂದಿನ ದಿನಗಳಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಧರ್ಮ ಸಹಿತ ಎಲ್ಲರನ್ನೂ ಸೇರಿಸಿ ಸೌಹಾರ್ದತೆಯೊಂದಿಗೆ ಮಾನವ ಸರಪಳಿ ಮಾಡಬೇಕು ಎಂದು ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು.

'ರಾಷ್ಟ್ರರಕ್ಷಣೆಗೆ ಸೌಹಾರ್ದ ಸಂಕಲ್ಪ' ಎನ್ನುವ ಚಿಂತನೆಯಲ್ಲಿ ಎಸ್.ಕೆ.ಎಸ್.ಎಸ್.ಎಫ್. ವತಿಯಿಂದ ಶುಕ್ರವಾರ ಮೂಡುಬಿದಿರೆಯಲ್ಲಿ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.

ಜಗತ್ತಿನಲ್ಲಿ ಅತ್ಯಂತ ಬಲಿಷ್ಠ, ಅತ್ಯಂತ ಸಂಪತ್ಭರಿತ ರಾಷ್ಟ್ರವಿದ್ದರೆ ಅದು ಭಾರತ, ಸೌಹಾರ್ದತೆಯ ಬಲಿಷ್ಠ ಭಾರತಕ್ಕೆ ನಾವು ನೀವೆಲ್ಲಾ ಒಂದಾಗಬೇಕೆಂದು ಹೇಳಿದ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದಂತಹ ಸೌಹಾರ್ದತೆ, ಒಗ್ಗಟ್ಟು ಈಗ ಎಲ್ಲಿ ಹೋಯಿತೆನ್ನುವುದನ್ನು ಇಂದಿನ ಜನಾಂಗ ಅರಿತುಕೊಳ್ಳಬೇಕು. ನಾವೆಲ್ಲಾ ಭಾರತೀಯರೆಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಿದಾಗ ನಮ್ಮ ಐಕ್ಯತೆ ಗಟ್ಟಿಯಾಗುತ್ತದೆ ಎಂದರು.

ಮಾನವ ಸರಪಳಿ ಸ್ವಾಗತ ಸಮಿತಿಯ ಅಧ್ಯಕ್ಷ ಡಿ.ಎ. ಉಸ್ಮಾನ್ ಹಾಜಿ ಏರ್ ಇಂಡಿಯಾ ಅಧ್ಯಕ್ಷತೆ ವಹಿಸಿದ್ದರು.

ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ನಾವು ಅನ್ಯೋನ್ಯವಾಗಿ ಬದುಕುವ ಸಂಕೇತ ಮಾನವ ಸರಪಳಿ. ನಮ್ಮ ಜಾತಿ, ಭಾಷೆ ಜತೆಗೆ ಇತರ ಜಾತಿ ಭಾಷೆಯನ್ನು ಗೌರವಿಸೋಣ. ನಾವೆಲ್ಲರೂ ಧರ್ಮವನ್ನು ಮುಂದಿಟ್ಟುಕೊಂಡು ಬದುಕೋಣ. ಇನ್ನೊಬ್ಬರ ಬಗ್ಗೆ ಸಂಶಯ ಬೇಡ. ಸಂಶಯವಿದ್ದರೆ ಪ್ರೀತಿ ಹುಟ್ಟಲಾರದು. ಪರದೇಶದ ಬಗ್ಗೆ ಅಲೋಚನೆ ಬಿಟ್ಟು ನಮ್ಮ ದೇಶದ ಬಗ್ಗೆ ಅಲೋಚನೆ ಮಾಡೋಣ. ಸಾಮಾಜಿಕ ಜಾಲತಾಣಗಳ ಬಗ್ಗೆ ಜಾಗೃತಿಯಿರಲಿ. ಸತ್ಯಾಸತ್ಯತೆಯನ್ನು ಅರಿಯಿರಿ. ಮಾನವ ಸರಪಳಿ ಸಾಮರಸ್ಯದ ಸಂಕೇತವಾಗಿ ಬೆಳೆದು ಬದುಕಿನುದ್ದಕ್ಕೂ ಸಾಗಲಿ ಎಂದು ಹೇಳಿದರು.

ಸಂಪಿಗೆ ಚರ್ಚ್ ಧರ್ಮಗುರು ರೆ.ಫಾ. ವಿನ್ಸೆಂಟ್ ಡಿ'ಸೋಜ ಮಾತನಾಡಿ,  ಈಶ ಸೇವೆ, ದೇಶ ಸೇವೆ, ಜನ ಸೇವೆ ಹಾಗೂ ಕಲಾಸೇವೆ ನಮ್ಮಲ್ಲಿರಬೇಕು ಎಂದರು.

ಮಾಜಿ ಸಚಿವ ಕೆ. ಅಭಯಚಂದ್ರ  ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

 ಎಸ್.ವೈ.ಎಸ್. ದ.ಕ. ಜಿಲ್ಲಾಧ್ಯಕ್ಷ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಮುಖ್ಯ ಪ್ರಭಾಷಣಗಾರರಾಗಿ ಭಾಗವಹಿಸಿ ಸೌಹಾರ್ದತೆ ಕುರಿತಾಗಿ ಮಾತನಾಡಿದರು.

 ಶೈಖುನಾ ಇರ್ಷಾದ್ ದಾರಿಮಿ ಮಿತ್ತಬೈಲ್ ಸೌಹಾರ್ದ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಎಸ್.ಕೆ.ಎಸ್.ಎಸ್.ಎಫ್. ದ.ಕ. ಜಿಲ್ಲಾ ವೆಸ್ಟ್ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಫೈಝಿ ಅಕ್ಕರಂಗಡಿ ಸ್ವಾಗತಿಸಿ, ರಾಜ್ಯಾಧ್ಯಕ್ಷ ಅಹ್ಮದ್ ರಫೀಕ್ ಹುದವಿ ಕೋಲಾರಿ ಪ್ರಾಸ್ತಾವಿಕ ಮಾತನಾಡಿದರು.

 ಮೂಡುಬಿದಿರೆ ವಲಯಾಧ್ಯಕ್ಷರಾದ ಅಶ್ರಫ್ ಮರೋಡಿ ಪ್ರತಿಜ್ಞೆ ಬೋಧಿಸಿದರು. ಕಾರ್ಯದರ್ಶಿ ಫಾರೂಕ್ ಮೂಡುಬಿದಿರೆ ವಂದಿಸಿದರು.

 ಬೆಳಿಗ್ಗೆ ನಡೆದ ಧ್ವಜಾರೋಹಣವನ್ನು ಮೂಡುಬಿದಿರೆ ಟೌನ್ ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುರ್ರಹ್ಮಾನ್ (ಅಬ್ಬುಕಾಕ) ನೆರವೇರಿಸಿದ್ದು, ತೋಡಾರ್ ಜುಮ್ಮಾ ಮಸೀದಿಯ ಮುದರ್ರಿಸ್ ಮೂಸಾ ದಾರಿಮಿ ದುವಾ ನೆರವೇರಿಸಿದರು.

 ಮಧ್ಯಾಹ್ನ ಲಾಡಿ ಮಸೀದಿ ಬಳಿಯಿಂದ ನಡೆದ ಮಾನವ ಸರಪಳಿ ಜಾಥಾವನ್ನು ಮೂಡುಬಿದಿರೆ ಜುಮ್ಮಾ ಮಸೀದಿಯ ಖತೀಬರಾದ ಅಬೂಬಕ್ಕರ್ ಸಿದ್ದೀಕ್ ದಾರಿಮಿ ಅವರು ಉದ್ಘಾಟಿಸಿದರು. ಮೂಡುಬಿದಿರೆ ವಲಯ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಸಯ್ಯಿದ್ ಅಕ್ರಮ್ ಆಲಿ ತಂಙಳ್ ಅಲ್ ಹಾದಿ ಅವರು ದುವಾ ನೆರವೇರಿಸಿದರು. ಸ್ವಾಗತ ಸಮಿತಿಯ ಕನ್ವಿನರ್ ಅಬ್ದುಲ್ ಅಝೀಝ್ ಮಾಲಿಕ್ ಧ್ವಜ ಹಸ್ತಾಂತರಿಸಿದರು.

ಪುರಸಭಾ ಸದಸ್ಯ ಇಕ್ಬಾಲ್ ಕರೀಮ್, ಆಸಿಫ್ ಆದರ್ಶ್, ಮೂಡುಬಿದಿರೆ ತಾಲೂಕು ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಅಬ್ದುಲ್ ಸಲಾಮ್ ಬೂಟ್ ಬಝಾರ್, ಎಚ್.ಎಮ್. ಅಬ್ದುಲ್ ಖಾದರ್ ಹಾಜಿ ಹಂಡೇಲ್, ಅದ್ದಾಕ ಪುತ್ತಿಗೆ, ಅದ್ದು ಗುಂಡೀರು, ಮುಹಮ್ಮದ್ ಶಾಫಿ, ಮಯ್ಯದ್ದಿ ಗುಂಡುಕಲ್ಲು ಮತ್ತಿತರರು ಉಪಸ್ಥಿತರಿದ್ದರು.

ಇರ್ಫಾನ್ ಅಸ್ಲಮಿ ಕಲಾಯಿ, ಸವಾದ್ ತೋಡಾರ್ ಕಾರ್ಯಕ್ರಮ ನಿರೂಪಿಸಿದರು.






Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article