Putturu: ಗ್ಯಾರೇಜಿನಿಂದ 69,800ರೂ. ಮೌಲ್ಯದ ಸೊತ್ತುಗಳ ಕಳವು
Sunday, January 21, 2024
ಪುತ್ತೂರು: ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ಇರ್ದೆ ಜಂಕ್ಷನ್ ಬಳಿ ಪುತ್ತೂರು-ಪಾಣಾಜೆ ರಸ್ತೆಯ ಬದಿಯಲ್ಲಿರುವ ಗ್ಯಾರೇಜೊಂದರ ಬೀಗ ಮುರಿದು ಒಳನುಗ್ಗಿದ ಕಳ್ಳರು 69,800 ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಬೆಟ್ಟಂಪಾಡಿ ಗ್ರಾಮದ ಕಕ್ಕೂರು ಎಂಬಲ್ಲಿನ ಪ್ರಸಾದ್ ಎಂಬವರಿಗೆ ಸೇರಿದ ಇರ್ದೆ ಜಂಕ್ಷನ್ ಬಳಿಯಿರುವ ಗ್ಯಾರೇಜಿನಿಂದ ಕಳವು ನಡೆದಿದೆ. ಪ್ರಸಾದ್ ಅವರು ಶುಕ್ರವಾರ ಸಂಜೆ ಗ್ರಾರೇಜಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ತಡರಾತ್ರಿಯ ವೇಳೆ ಗ್ಯಾರೇಜಿನ ಬಾಗಿಲು ತೆರೆದಿಟ್ಟಿರುವುದನ್ನು ಗಮನಿಸಿದ ಅಲ್ಲಿನ ಸ್ಥಳೀಯರೊಬ್ಬರು ಈ ಕುರಿತು ಕರೆ ಮಾಡಿ ಪ್ರಸಾದ್ ಅವರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿಯ ಹಿನ್ನಲೆಯಲ್ಲಿ ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಗ್ಯಾರೇಜಿನ ಬಾಗಿಲ ಬೀಗ ಮುರಿದು 69,800 ರೂ. ಮೌಲ್ಯದ ಸುತ್ತುಗಳನ್ನು ಕಳವು ಮಾಡಿರುವುದು ಗಮನಕ್ಕೆ ಬಂದಿದೆ.
ಘಟನೆಯ ಕುರಿತು ಪ್ರಸಾದ್ ಅವರು ನೀಡಿರುವ ದೂರಿನಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡನೇ ಬಾರಿಗೆ ಕಳವು:
ಪ್ರಸಾದ್ ಅವರ ಗ್ಯಾರೇಜಿನಿಂದ ಕಳೆದ ವರ್ಷವೂ ಕೆಲವೊಂದು ಮೆಕ್ಯಾನಿಕ್ ಉಪಕರಣಗಳ ಕಳವು ನಡೆದಿತ್ತು. ಆದರೆ ಅವರು ಈ ಕುರಿತು ಪೊಲೀಸರಿಗೆ ದೂರು ನೀಡಿರಲಿಲ್ಲ. ಇದೀಗ ಎರಡನೇ ಬಾರಿಗೆ ಕಳವು ನಡೆದಿದೆ.