Chikkamagaluru: ಗುಲಾಬಿ ಅಭಿಯಾನ ಜಾಥಾಕ್ಕೆ ಚಾಲನೆ
ಚಿಕ್ಕಮಗಳೂರು: ಶಿಕ್ಷಣ ಸಂಸ್ಥೆಗಳ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯಾದ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತ್ತಿಲ್ಲ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಚಿಕ್ಕಮಗಳೂರು ಇವರ ವತಿಯಿಂದ ಬುಧವಾರ ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಗುಲಾಬಿ ಅಭಿಯಾನ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿ ಮಾಲೀಕರಿಗೆ ಹಾಗೂ ಸಾರ್ವಜನಿಕರಿಗೆ ಕೆಂಪು ಗುಲಾಬಿ ನೀಡುವುದರ ಮೂಲಕ ಅರಿವು ಮೂಡಿಸಿ ತಂಬಾಕು ಉತ್ಪನ್ನಗಳ ಮಾರಾಟ ಮಾಡದಂತೆ ಒಳ್ಳೆಯ ಸಂದೇಶ ನೀಡುವಂತೆ ಅವರು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಸೋಮ ಎ.ಎಸ್. ಮಾತನಾಡಿ ಯುವಕರು ಹೆಚ್ಚು ತಂಬಾಕು ಸೇವನೆ ಮಾಡುತ್ತಿದ್ದು, ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ವಿದ್ಯಾರ್ಥಿಗಳು ತಂಬಾಕು ಸೇವನೆಯಿಂದ ದೂರ ಇರುವಂತೆ ಮನವಿ ಮಾಡಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ ಮಾತನಾಡಿ ವಿಶ್ವದಲ್ಲಿ ಅತಿ ಹೆಚ್ಚು ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳಿಗೆ ಮುಖ್ಯ ಕಾರಣ ಧೂಮಪಾನ. ತಂಬಾಕು ಸೇವನೆ ವಿವಿಧ ಕ್ಯಾನ್ಸರ್‌ಗಳಿಗೆ ಕಾರಣವಾಗುತ್ತದೆ. ತಂಬಾಕು ಸೇವನೆಯನ್ನು ಮಾಡುವವರು ತಂಬಾಕು ಸೇವನೆ ಮಾಡದಂತೆ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅಶ್ವಥ್ ಬಾಬು ಮಾತನಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತಂಬಾಕು ಸೇವನೆ ಮಾಡುವವರನ್ನು ಗುರುತಿಸಿ ದಂಡ ವಿಧಿಸಲಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳಲ್ಲಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಜಾಥಾದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಶಶಿಕಲಾ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಸೀಮಾ, ಜಿಲ್ಲಾ ತಂಬಾಕು ನಿಯಂತ್ರಣಾ ಸಲಹೆಗಾರರು ದಿನೇಶ್ .ಡಿ ಮತ್ತಿತರರು ಉಪಸ್ಥಿತರಿದ್ದರು.