Chikkamagaluru: ಸರ್ಕಾರದಿಂದ ಪಡೆದಿರುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಸೂಚನೆ

Chikkamagaluru: ಸರ್ಕಾರದಿಂದ ಪಡೆದಿರುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಸೂಚನೆ


ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪ್ರಗತಿ ಸಾಧಿಸದ ರೈತ ಉತ್ಪಾದಕರ ಸಂಸ್ಥೆಗಳು ಸರ್ಕಾರದಿಂದ ಪಡೆದಿರುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ರೈತ ಉತ್ಪಾದಕರ ಸಂಸ್ಥೆಗಳ ಸಮನ್ವಯ ಮತ್ತು ಮೇಲ್ವಿಚಾರಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಉತ್ಪಾದಕರ ಸಂಸ್ಥೆಗಳಿಗೆ ಸಬ್ಸಿಡಿ ದರದಲ್ಲಿ ಸಾಲ ನೀಡುತ್ತಿದ್ದು, ಇದನ್ನು ಸದುಪಯೋಗ ಪಡಿಸಿಕೊಂಡು ರೈತ ಉತ್ಪಾದಕರ ಸಂಸ್ಥೆಗಳು ಅಭಿವೃದ್ಧಿ ಹೊಂದಬೇಕು. ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ರೇಷ್ಮೆ, ಕುರಿ, ಮೇಕೆ ಸಾಕಾಣಿಕೆ ಮುಂತಾದ ಮೌಲ್ಯವರ್ಧನೆ ಘಟಕಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅಧಿಕಾರಿಗಳು ರೈತರಿಗೆ ಮೌಲ್ಯವರ್ಧನೆ ಕುರಿತು ತಾಂತ್ರಿಕ ತರಬೇತಿ ನೀಡುವುದರ ಮೂಲಕ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮವಹಿಸಬೇಕು. ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು, ಸಕಾಲಕ್ಕೆ ಗುಣಮಟ್ಟದ ಪರಿಕರಗಳು ದೊರಕುವಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಒಂದು ಮೀನು ಉತ್ಪಾದಕರ ಸಂಸ್ಥೆ ಮಾತ್ರ ನೋಂದಣಿಯಾಗಿದೆ. ಮೀನುಗಾರಿಕೆ ಇಲಾಖೆಯಿಂದ ಅವರಿಗೆ ಬೇಕಾದ ಸೌಲಭ್ಯ ಕಲ್ಪಿಸಬೇಕು ಎಂದ ಅವರು ಮೀನುಗಾರಿಕೆ ಇಲಾಖೆ ಪ್ರಗತಿ ತೃಪ್ತಿದಾಯಕವಾಗಿಲ್ಲ. ಇನ್ನೂ ಮುಂದೆ ಅವರಿಗೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಕಲ್ಪಿಸುವಂತೆ ಸೂಚಿಸಿದರು.

ರೈತ ಉತ್ಪಾದಕರ ಸಂಸ್ಥೆಗಳು ಉತ್ಪಾದಿಸಿದ ಉತ್ಪಾದನೆಯನ್ನು ಶೇಖರಿಸಿಡಲು ಭೂಮಿ ಗುರುತಿಸಿ ಅರ್ಜಿ ಸಲ್ಲಿಸಿದರೆ. ಆದ್ಯತೆ ಅನುಸಾರ ಮಂಜೂರು ಮಾಡಲಾಗುವುದು ಎಂದ ಅವರು. ಈ ಸಂಸ್ಥೆಗಳಿಗೆ ಬ್ಯಾಂಕುಗಳಿಂದ ನೀಡಲಾಗುವ ಸಾಲ ಸೌಲಭ್ಯಗಳ ಕುರಿತು ಫೆಬ್ರವರಿ 13 ರಂದು ಜಿಲ್ಲೆಯ ಎಲ್ಲಾ ರೈತ ಉತ್ಪಾದಕರ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪ್ರತಿನಿಧಿಗಳ ಸಭೆಯನ್ನು ಲೀಡ್ ಬ್ಯಾಂಕ್‌ನಲ್ಲಿ ಕರೆದು ಮಾಹಿತಿ ನೀಡುವಂತೆ ಲೀಡ್ ಬ್ಯಾಂಕ್ ಮ್ಯಾನೇಜರ್‌ಗೆ ಸೂಚಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತ ಸಭೆಗೆ ಮಾಹಿತಿ ನೀಡಿ ಪಿಎಂಎಫ್‌ಎಂಇ ಯೋಜನೆಯಡಿ ಶೇಕಡಾ 50 ರಷ್ಟು ಸಾಲ ಸಂಪರ್ಕಿತ ಅನುದಾನವನ್ನು ಗರಿಷ್ಠ ರೂ. 15 ಲಕ್ಷಗಳವರೆಗೆ ಪಡೆಯಬಹುದಾಗಿದೆ. ಸೆಕೆಂಡರಿ ಕೃಷಿ ಯೋಜನೆಯಡಿ ಯೋಜನಾ ವೆಚ್ಚದ ಶೇಕಡಾ 50 (ಗರಿಷ್ಟ 10 ಲಕ್ಷದವರೆಗೆ) ಸಾಲಾಧಾರಿತ ಸಹಾಯಧನ ಪಡೆಯಬಹುದಾಗಿದೆ. ಕೃಷಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯೋಜನೆಯಡಿ ರೂ. ೨ ಕೋಟಿವರೆಗೆ, ಹೈಟೆಕ್ ಹಾರ್ವೆಸ್ಟರ್ ಹಬ್ ಕಾರ್ಯಕ್ರಮದಡಿ ಕಂಬೈನ್ಡ್ ಹಾರ್ವೆಸ್ಟರ್‌ಗಳನ್ನು ಖರೀದಿಸಲು ರೂ. 40 ಲಕ್ಷದವರೆಗೆ ಸಹಾಯಧನ ಪಡೆಯಬಹುದಾಗಿದೆ ಎಂದು ಹಿಂದುಳಿದ ತಾಲ್ಲೂಕುಗಳಾದ ಕಡೂರು ಹಾಗೂ ತರೀಕೆರೆ ತಾಲ್ಲೂಕಿನ ರೈತ ಉತ್ಪಾದಕರ ಸಂಸ್ಥೆಗಳು ಪಡೆದ ಸಾಲಕ್ಕೆ ಶೇ. 4 ರ ಬಡ್ಡಿ ಸಹಾಯಧನ ಪಡೆಯಬಹುದಾಗಿದೆ ಎಂದರು.

ಕೃಷಿ ಇಲಾಖೆಯಿಂದ ರೈತ ಉತ್ಪಾದಕರ ಸಂಸ್ಥೆಗಳಿಗೆ ಸುತ್ತು ನಿಧಿ, ಅಧ್ಯಯನ ಪ್ರವಾಸ, ತರಬೇತಿ, ಕಚೇರಿ ನಿರ್ವಹಣಾ ವೆಚ್ಚಗಳಿಗೆ ಅನುದಾನ ನೀಡಲಾಗಿದೆ. ಕೀಟನಾಶಕ, ಬಿತ್ತನೆ ಬೀಜ, ರಸಗೊಬ್ಬರ ಪರವಾನಿಗೆಗಳನ್ನು ನೀಡುವುದರ ಮೂಲಕ ಆರ್ಥಿಕ ವಹಿವಾಟು ನಡೆಸಲು ಉತ್ತೇಜನ ನೀಡಲಾಗಿದ್ದು, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕಡೂರು ತಾಲ್ಲೂಕಿನ ವಿಜಿಆರ್‌ಒಎಸ್‌ಎಲ್‌ಎಲ್ ಸಂಸ್ಥೆಗೆ ರೂ 5.2 ಲಕ್ಷ ಹಾಗೂ ತರೀಕೆರೆ ತಾಲ್ಲೂಕಿನ ವೀರಾಂಜನೇಯ ಸಂಸ್ಥೆಗೆ ರೂ. 9.4 ಲಕ್ಷಗಳ ಅನುದಾನದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲಾಗಿದೆ. ಕಡೂರು ತಾಲ್ಲೂಕಿನ ಯಗಟಿ ರೈತ ಉತ್ಪಾದಕರ ಸಂಸ್ಥೆಗೆ ರೂ. 8 ಲಕ್ಷ ಅನುದಾನ ಫಾರಂ ಮಿಷನರಿ ಬ್ಯಾಂಕ್ ಒದಗಿಸಲಾಗಿದೆ ಎಂದರು.

ಸಭೆಯಲ್ಲಿ ಎ.ಎನ್. ಮಹೇಶ್ ರೈತ ಉತ್ಪಾದಕರ ಸಂಸ್ಥೆಗಳ ಪ್ರತಿನಿಧಿಗಳು, ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article