Dharmastala: ಪ್ಲಾಸ್ಟಿಕ್ ಬಳಕೆ ಮುಕ್ತ ಗ್ರಾಮ: ಸಚಿವ ಈಶ್ವರ ಖಂಡ್ರೆ ಫೋಷಣೆ

Dharmastala: ಪ್ಲಾಸ್ಟಿಕ್ ಬಳಕೆ ಮುಕ್ತ ಗ್ರಾಮ: ಸಚಿವ ಈಶ್ವರ ಖಂಡ್ರೆ ಫೋಷಣೆ

ಧರ್ಮಸ್ಥಳ ಪ್ಲಾಸ್ಟಿಕ್ ಬಳಕೆ ಮುಕ್ತ ಗ್ರಾಮವಾಗಿ ರಾಜ್ಯಕ್ಕೆ ಮಾದರಿ


ಉಜಿರೆ: ಪ್ಲಾಸ್ಟಿಕ್ ಬಳಕೆ ಮತ್ತು ಪ್ಲಾಸ್ಟಿಕ್‌ತ್ಯಾಜ್ಯ ನಮ್ಮ ಆರೋಗ್ಯ ಮತ್ತು ಪರಿಸರಕ್ಕೆ ಅತ್ಯಂತ ಹಾನಿಕಾರಕವಾಗಿದ್ದು ಇಂತಹ ಪವಿತ್ರ ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಿ ಧರ್ಮಸ್ಥಳ ರಾಜ್ಯಕ್ಕೆ ಸ್ವಚ್ಛ, ಸುಂದರ ಗ್ರಾಮವಾಗಿ ರಾಜ್ಯಕ್ಕೆ ಮಾದರಿಯಾಗಿ ಬೆಳೆಯಲಿ. ತನ್ಮೂಲಕ ಇಡೀ ರಾಜ್ಯವೇ ಪ್ಲಾಸ್ಟಿಕ್ ಬಳಕೆ ಮುಕ್ತ ರಾಜ್ಯವಾಗಬೇಕು ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದರು.

ಅವರು ಸೋಮವಾರ ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ನಡೆದ ಸರಳ ಸಮಾರಂಭದಲ್ಲಿ ಧರ್ಮಸ್ಥಳ ಗ್ರಾಮವನ್ನು ಪ್ಲಾಸ್ಟಿಕ್ ಬಳಕೆ ಮುಕ್ತ ಗ್ರಾಮವಾಗಿ ಘೋಷಣೆ ಮಾಡಿ ಮಾತನಾಡಿದರು.

ಸುಂದರ, ಪ್ರಶಾಂತ ಪ್ರಾಕೃತಿಕ ಪರಿಸರದಲ್ಲಿ ಕಣ್ಮನ ಸೆಳೆಯುತ್ತಿರುವ ನಾಡಿನ ಖ್ಯಾತ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳಕ್ಕೆ ನಿತ್ಯವೂ ಸಾವಿರಾರು ಮಂದಿ ಭಕ್ತಾದಿಗಳು ಶ್ರದ್ಧಾ-ಭಕ್ತಿಯೊಂದಿಗೆ ಬಂದು ಸೇವೆ ಮಾಡುತ್ತಾರೆ ಪಶ್ಚಿಮಘಟ್ಟ ಪರ್ವತ ಶ್ರೇಣಿಯು ಅನೇಕ ನದಿಗಳ ಉಗಮಸ್ಥಾನವಾಗಿದೆ. ಪರಿಸರ ನಾಶದಿಂದಾಗಿ ಭೂಕಂಪ, ಬರ, ನೆರೆ, ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತವೆ. ಪ್ಲಾಸ್ಟಿಕ್ ಮಾರಾಟ ಮತ್ತು ಖರೀದಿ ಮತ್ತು ಬಳಕೆ ಸಂಪೂರ್ಣ ನಿಷೇಧಿಬೇಕು. ಯಾತ್ರಿಕರು ನೇತ್ರಾವತಿ ನದಿಯಲ್ಲಿ ಕೂಡಾ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳನ್ನು ಬಿಸಾಡುವುದನ್ನು ಅವರು ಖಂಡಿಸಿದರು.

ಧರ್ಮಸ್ಥಳದ ವತಿಯಿಂದ ಬೀದರ್ ಜಿಲ್ಲೆಯಲ್ಲಿ ಹೈನುಗಾರಿಕೆ ಹಾಗೂ ಮಹಿಳಾ ಸಬಳಿಕರಣಕ್ಕೆ ಹೆಗ್ಗಡೆಯವರು ನೀಡಿದ ಸಹಕಾರವನ್ನು ಅವರು ಕೃತಜ್ಞತೆಯೊಂದಿಗೆ ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಧರ್ಮಸ್ಥಳದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿವಾರಣೆಗಾಗಿ ಒಂದು ವಾರದೊಳಗೆ ಎರಡು ಹೊಸ ಯಂತ್ರಗಳನ್ನು ಖರೀದಿಸಿ ತ್ಯಾಜ್ಯ ಸಂಗ್ರಹ ಮಾಡಲಾಗುವುದು. ಪ್ಲಾಸ್ಟಿಕ್‌ತ್ಯಾಜ್ಯವನ್ನು ರಸ್ತೆ ದುರಸ್ತಿಗೆ ಮರುಬಳಕೆ ಮಾಡಲಾಗುವುದು ಎಂದರು.

ವಿದೇಶಗಳಲ್ಲಿ ಎಲ್ಲರೂ ಸ್ವಚ್ಛತೆಗೆ ಆದ್ಯತೆ ಕೊಡುವಂತೆ ನಮ್ಮಲ್ಲಿಯೂ ಸ್ವಚ್ಛತೆ ಬಗ್ಗೆ ಅರಿವು, ಜಾಗೃತಿ ಮೂಡಿಸಬೇಕಾಗಿದೆ. ಪ್ರತಿಯೊಬ್ಬರೂ ವಾರದಲ್ಲಿ ಎರಡು ದಿನ ಶನಿವಾರ-ಭಾನುವಾರ ತಮ್ಮ ಮನೆ ಮತ್ತು ಪರಿಸರ ಸ್ವಚ್ಛತೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್‌ಶಿವರಾಂ, ಮಂಗಳೂರು ವೃತ್ತ ಸಿ.ಎಫ್.ಒ. ವಿ. ಕರಿಜಳನ್, ಕೆ.ಎಸ್.ಡಿ.ಸಿ. ಕಮಲಾ ಕರಿಕಳನ್, ಡಿ.ಎಫ್.ಒ. ಅಂಥೋನಿ, ಎಸ್. ಮರಿಯಪ್ಪ, ಎ.ಸಿ.ಎಫ್ ಶ್ರೀಧರ್, ಬೆಳ್ತಂಗಡಿ ವಲಯಅರಣ್ಯಾಧಿಕಾರಿ ಮೋಹನ್ ಕುಮಾರ್, ಉಪ್ಪಿನಂಗಡಿ ವಲಯಅರಣ್ಯ ಅಧಿಕಾರಿ, ಜಯಪ್ರಕಾಶ್ ಕೆ.ಕೆ. ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿಮಲಾ, ಉಪಾಧ್ಯಕ್ಷ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article