Dharmastala: ಕಂದಾಯ-ಅರಣ್ಯ ಇಲಾಖೆ ಜಂಟಿ ಸರ್ವೆ ಬಳಿಕ ಸೂಕ್ತ ಕ್ರಮ
Monday, February 5, 2024
ಧರ್ಮಸ್ಥಳ: ಬೆಳ್ತಂಗಡಿ ತಾಲ್ಲೂಕಿನಲ್ಲಿ ಡೀಮ್ಡ್ ಅರಣ್ಯ 1 ಮತ್ತು ಡೀಮ್ಡ್ ಅರಣ್ಯ 2 ಎಂಬ ವಿಭಾಗಗಳಿವೆ. ಡೀಮ್ಡ್ ಅರಣ್ಯ 1ನ್ನು ಬಿಡಲು ಸಾಧ್ಯವಿಲ್ಲ. ಡೀಮ್ಡ್ ಅರಣ್ಯ 2 ವಿಭಾಗದಲ್ಲಿ ಮೂರು ಲಕ್ಷದ ಮೂವತ್ತು ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿದ್ದು, ಇದರಲ್ಲಿ ಜನವಸತಿ, ಶಾಲೆ ಇದ್ದಲ್ಲಿ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ಬಳಿಕ, ಗಡಿ ಗುರುತಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದರು.
ಅವರು ಫೆ.5 ರಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದೇವರ ದರ್ಶನ ಪಡದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಈ ಕುರಿತು ಪ್ರತಿಕ್ರಿಯೆ ನೀಡಿದರು.
ಕಳೆಂಜದಲ್ಲಿ ಅರಣ್ಯ ಪ್ರದೇಶದಲ್ಲಿ ಕಟ್ಟಿದ ಮನೆ ತೆರವು ಪ್ರಕರಣದ ಬಗ್ಗೆ ತನಿಖಾ ವರದಿ ಬಂದ ಬಳಿಕ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.
ಕೃಷಿಗೆ ಕಾಡಾನೆಗಳ ಕಾಟದ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು ಕೃಷಿ ಹಾನಿಗೆ ಈಗಾಗಲೆ 35 ಕೋಟಿ ರೂ. ಪರಿಹಾರ ನೀಡಲಾಗಿದೆ. ಕಾಡಾನೆಗಳ ಕಾಟ ತಪ್ಪಿಸಲು ಆನೆಕಂದಕ, ಸೋಲಾರ್‌ಬೇಲಿ, ರೇಡಿಯೊ ಕಾಲರ್ ಬಳಕೆ ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗುವುದು. ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನಿವಾರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಅರಣ್ಯಕ್ಕೆ ಯಾರೂ ಬೆಂಕಿ ಹಚ್ಚಬಾರದು. ಇದು ಮಹಾಪಾಪದ ಕೆಲಸವಾಗಿದೆ. ಕಾಡ್ಗಿಚ್ಚು ಹಬ್ಬದಂತೆ ಜನರು ಕೂಡಾ ಎಚ್ಚರಿಕೆ ವಹಿಸಬೇಕು ಎಂದು ಸಚಿವರು ಸಲಹೆ ನೀಡಿದರು.