Mangalore: ಜೆರೋಸಾ ಶಿಕ್ಷಣ ಸಂಸ್ಥೆ ಪ್ರಕರಣ-ವಿಚಾರಣೆ ಪೂರ್ಣ
Tuesday, February 20, 2024
ಮಂಗಳೂರು: ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆ ಶಿಕ್ಷಕಿಯಿಂದ ಶ್ರೀರಾಮನ ಅವಹೇಳನ ಆರೋಪಕ್ಕೆ ಸಂಬಂಧಿಸಿ ತನಿಖಾಧಿಕಾರಿಗಳು ಮಂಗಳವಾರ ವಿಚಾರಣೆ ಪೂರ್ಣಗೊಳಿಸಿದ್ದಾರೆ.
ತನಿಖಾ ವಿಚಾರದಲ್ಲಿ ಯಾರಿಗೂ ಅನ್ಯಾಯ ಆಗಬಾರದು. ಹೀಗಾಗಿ ಸರಿಯಾಗಿ ಹೇಳಿಕೆಗಳನ್ನು ಪರಿಶೀಲನೆ ಮಾಡಿ ಅಂತಿಮ ವರದಿ ಸಿದ್ಧಪಡಿಸಿ ಬಳಿಕ ಶೀಘ್ರ ಸರ್ಕಾರಕ್ಕೆ ಸಲ್ಲಿಸುವುದಾಗಿ ತನಿಖಾಧಿಕಾರಿ ಆಗಿರುವ ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತ ಡಾ. ಆಕಾಶ್ ಮಂಗಳೂರಿನ ಡಿಡಿಪಿಐ ಕಚೇರಿಯಲ್ಲಿ ದಿನಪೂರ್ತಿ ವಿಚಾರಣೆ ನಡೆಸಿದ ಬಳಿಕ ಅವರು ಸುದ್ದಿಗಾರರಿಗೆ ತಿಳಿದರು.
ಎರಡು ದಿನಗಳಿಂದ ಪ್ರಕರಣದ ಬಗ್ಗೆ ನಿರಂತರ ವಿಚಾರಣೆ ನಡೆಸಿದ್ದೇನೆ. ಸೋಮವಾರ ತಡರಾತ್ರಿಯವರೆಗೂ ಇದ್ದು ಅಧಿಕಾರಿಗಳ ಜೊತೆ ಮಾಹಿತಿ ಪಡೆದಿದ್ದೆ. ಬಳಿಕ ಎಲ್ಲ ದೂರುದಾರರು, ಮನವಿ ಕೊಟ್ಟವರಿಗೆ ವಿಚಾರಣೆಗೆ ನೊಟೀಸ್ ಮಾಡಲಾಗಿತ್ತು. ಎಲ್ಲರನ್ನೂ ಕರೆಸಿ ಮಂಗಳವಾರ ಇಡೀ ದಿನ ಹೇಳಿಕೆ ಪಡೆಯಲಾಗಿದೆ. ಮಕ್ಕಳು ಕೂಡ ಆಗಮಿಸಿ ತಮ್ಮ ಹೇಳಿಕೆ ನೀಡಿದ್ದಾರೆ. ಪೋಷಕರ ಹೇಳಿಕೆ, ಮನವಿ ಕೊಟ್ಟಿವರ ಹೇಳಿಕೆ ಪಡೆಯಲಾಗಿದೆ.
ಜೆರೋಸಾ ಶಾಲೆಗೂ ಭೇಟಿ ನೀಡಿ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದೇನೆ. ಬಹುತೇಕ ಎಲ್ಲರ ಹೇಳಿಕೆ ಪಡೆಯಲಾಗಿದೆ, ಬೇಕಾದರೆ ಮತ್ತೆ ಕರೆಸಿ ಹೇಳಿಕೆ ಪಡೆಯುತ್ತೇನೆ. ಎರಡು ದಿನಗಳಲ್ಲಿ ವಿಚಾರಣೆ ನಡೆಸಿ ವರದಿ ಕೊಡಲು ಅಸಾಧ್ಯ. ಹಾಗಾಗಿ ಇನ್ನೂ ಸ್ವಲ್ಪ ಮಾಹಿತಿ ಕಲೆ ಹಾಕಿ ಅಂತಿಮ ವರದಿ ಸಿದ್ಧಪಡಿಸುತ್ತೇನೆ. ವರದಿ ಸತ್ಯಾಸತ್ಯತೆ ಇರಬೇಕು ಎಂದವರು ತಿಳಿಸಿದ್ದಾರೆ.