Mangalore: ಶ್ರೀ ಕಾಶೀ ಮಠ ಸಂಸ್ಥಾನದ ವತಿಯಿಂದ ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಬೆಳ್ಳಿ ಪಲ್ಲಕಿ ಸಮರ್ಪಣೆ
Sunday, February 4, 2024
ಮಂಗಳೂರು: ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಶ್ರೀ ಕಾಶೀ ಮಠ ಸಂಸ್ಥಾನದ ವತಿಯಿಂದ ನೂತನವಾಗಿ ನಿರ್ಮಿಸಲಾದ ಬೆಳ್ಳಿ ಪಲ್ಲಕಿಯನ್ನು ಶೀಘ್ರದಲ್ಲೇ ಸಮರ್ಪಿಸಲಾಗುವುದು. ಅದರ ಪೂರ್ವಭಾವಿಯಾಗಿ ಫೆ.3 ರಂದು ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ನೂತನ ಬೆಳ್ಳಿ ಪಲ್ಲಕಿಯ ಪುರ ಪ್ರವೇಶ ಕಾರ್ಯಕ್ರಮ ನಡೆಯಿತು.
ಆ ಪ್ರಯುಕ್ತ ಪಲ್ಲಕಿಯ ಮೆರವಣಿಗೆಯು ಶ್ರೀ ದೇವಳದ ಬಳಿಯಿಂದ ಸಂಜೆ 6 ಗಂಟೆಗೆ ಹೊರಟು ಮಹಾಮಾಯ ದೇವಸ್ಥಾನ ಡೊಂಗರಕೇರಿ, ಚಿತ್ರಾ ಜಂಕ್ಷನ್ ಬಳಿಯಿಂದ ಎಡಕ್ಕೆ ತಿರುಗಿ ಬಳಿಕ ಸ್ವದೇಶೀ ಸ್ಟೋರ್ಸ್ ಮೂಲಕ ರಥಬೀದಿ ಮೂಲಕ ಸುಮಾರು 7 ಗಂಟೆಗೆ ಕಾಶೀ ಮಠಾಧೀಶರಾದ ಶ್ರೀ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಆಗಮನದ ಬಳಿಕ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಸಕಲ ಬಿರುದಾವಳಿಗಳೊಂದಿಗೆ ಭವ್ಯ ಶೋಭಾ ಯಾತ್ರೆ ನಡೆಯಿತು.
ದೇವಳಕ್ಕೆ ತಲುಪಿದ ತದನಂತರ ಶ್ರೀಗಳ ಉಪಸ್ಥಿತಿಯಲ್ಲಿ ಶ್ರೀ ದೇವರ ರಾತ್ರಿ ಪೂಜೆ ಬಳಿಕ ಶ್ರೀ ವೆಂಕಟರಮಣ ದೇವಳದ ಶ್ರೀ ದೇವರ ಉತ್ಸವಕ್ಕಾಗಿ ನೂತನವಾಗಿ ನಿರ್ಮಿಸಲಾದ ಸ್ವರ್ಣ ಲಾಲ್ಕಿ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು ಹಾಗೂ ಸಭಾಕಾರ್ಯಕ್ರಮ ನಡೆಯಿತು.
ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ, ಕಿರಣ್ ಪೈ, ಸತೀಶ್ ಪ್ರಭು, ಗಣೇಶ್ ಕಾಮತ್, ಜಗನ್ನಾಥ್ ಕಾಮತ್, ಉದ್ಯಮಿ ಪಿ. ದಯಾನಂದ ಪೈ ಮತ್ತಿತರರು ಉಪಸ್ಥಿತರಿದ್ದರು.