
Mangalore: ದಿಸಂಸ್ಕಾರದಿಂದಲೇ ಸಂಸಾರ್: ಬ್ರಹ್ಮಕುಮಾರಿ ಶಿವಾನಿ
ಮಂಗಳೂರು: ನಮ್ಮ ಮನೆ, ಪರಿಸರದಲ್ಲಿ ಶಾಂತಿ, ನೆಮ್ಮದಿಯು ಅಲ್ಲಿ ಜೀವಿಸುವ ಮನುಷ್ಯರ ಸಂಸ್ಕಾರದ ಮೇಲೆ ಅವಲಂಬಿತವಾಗಿರುತ್ತದೆ. ಸಂಸ್ಕಾರದಿಂದಲೇ ಸಂಸಾರ್ (ಜಗತ್ತು) ಎಂದು ದೇಶದ ಉನ್ನತ ನಾಗರಿಕ ಪ್ರಶಸ್ತಿ ‘ನಾರಿಶಕ್ತಿ’ ಪುರಸ್ಕೃತೆ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗ ಶಿಕ್ಷಕಿ, ವಿಶ್ವವಿಖ್ಯಾತ ಪ್ರವಚನಕಾರರಾದ ಬ್ರಹ್ಮಕುಮಾರಿ ಶಿವಾನಿ ಹೇಳಿದ್ದಾರೆ.
ಮಂಗಳೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನಗರದ ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಭಾನುವಾರ ‘ಲಿವಿಂಗ್ ಲೈಫ್ ವಿದ್ ಈಸ್ ಆಂಡ್ ಗ್ರೇಸ್’ ವಿಚಾರದ ಕುರಿತು ಅವರು ಉಪನ್ಯಾಸ ನೀಡಿದರು. ಸಾವಿರಾರು ಮಂದಿ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.
ಮನೆ, ಸುತ್ತಲಿನ ಪರಿಸರದಲ್ಲಿ ಪ್ರೀತಿ, ಶಾಂತಿ, ನೆಮ್ಮದಿ ಇದ್ದರೆ ಮಾತ್ರ ಅದು ಸ್ವರ್ಗ ಅನಿಸುತ್ತದೆ, ಇಲ್ಲದಿದ್ದರೆ ನರಕ. ಇದನ್ನು ಶ್ರೀಮಂತಿಕೆ, ಮನೆಯ ಗಾತ್ರ, ದುಬಾರಿ ವಸ್ತು, ಪೀಠೋಪಕರಣಗಳ ಮೂಲಕ ಅಳೆಯಲಾಗದು. ಮನೆಯೊಳಗೆ ಬದುಕುವ ಜನರ ಸಂಸ್ಕಾರದ ಮೇಲೆ ಅವಲಂಬಿತ. ಅದನ್ನು ಸಾಕಾರಗೊಳಿಸಬೇಕು ಎಂದು ಕರೆ ನೀಡಿದರು.
ಕೊಡುವ ಕೈಗಳಿಗೆ ಸಂತೋಷ:
ನಾವೆಲ್ಲರೂ ಮನುಷ್ಯ ಜೀವಿ (ಹ್ಯೂಮನ್ ಬೀಯಿಂಗ್ಸ್)ಗಳೇ ಹೊರತು ‘ಹ್ಯೂಮನ್ ಡೂಯಿಂಗ್ಸ್’ ಅಲ್ಲ. ಆದರೆ ನಾವು ‘ಬೀಯಿಂಗ್’ನಂತೆ ಯೋಚಿಸದೆ ‘ಡೂಯಿಂಗ್’ನಲ್ಲೇ ನಿರತರಾಗಿರುತ್ತೇವೆ. ಏನೇ ಕೆಲಸ ಮಾಡಿದರೂ ಅನೇಕರಿಗೆ ಜೀವನದಲ್ಲಿ ಸಂತೋಷ, ಪ್ರೀತಿ ದೊರೆಯಲ್ಲ. ಜೀವನದ ಸಂತೋಷ, ನಿಷ್ಕಲ್ಮಶತೆ ಕೊಡುವ ಕೈಗಳಲ್ಲಿ ಅಡಗಿರುತ್ತದೆ. ಕೊಡುವ ಕೈಗಳು ಎಂದೂ ನಮ್ಮ ಶಕ್ತಿಯನ್ನು ಬಲಗೊಳಿಸುತ್ತದೆ ಎಂದು ಶಿವಾನಿ ಹೇಳಿದರು.
ಆಲೋಚನೆಗಳಿಗೆ ತಕ್ಕ ಪ್ರತಿಕ್ರಿಯೆ:
ಪ್ರಸ್ತುತ ಘೋರ ಕಲಿಯುಗ ನಡೆಯುತ್ತಿದೆ. ಭವಿಷ್ಯವೇನು? ಎಂದೂ ಪ್ರಳಯವಾಗಲು ಸಾಧ್ಯವಿಲ್ಲ. ಈ ಜಗತ್ತು ಎಂದೂ ನಾಶವಾಗದು. ಆದರೆ ರಾತ್ರಿಗಳು ನಾಶವಾಗಲಿವೆ. ಕೆಲವರು ಏಳುವ ಹೊತ್ತಿಗೆ ಇನ್ನು ಕೆಲವರ ಮಲಗುವ ಸಮಯ ಬಂದಿದೆ. ಸೃಷ್ಟಿಯ ನಿರ್ಣಾಯಕ ಕಾಲಘಟ್ಟ ಈಗ ನಡೆಯುತ್ತಿದೆ ಎಂದ ಅವರು, ಕಲಿಯುಗದಲ್ಲಿ ನಮ್ಮ ಆಲೋಚನೆಗಳಿಂದ ನಮ್ಮನ್ನು ನಾವೇ ಕೊಲ್ಲುತ್ತಿದ್ದೇವೆ. ಸಂತೋಷ, ಪ್ರೀತಿ, ದುಃಖ, ಭಯ, ಕ್ರೋಧ, ನಂಬಿಕೆ ಹೀಗೆ ನಮ್ಮ ಆಲೋಚನೆಗಳು ಹೇಗಿರುತ್ತವೋ ಅದಕ್ಕೆ ತಕ್ಕನಾದ ಪ್ರತಿಕ್ರಿಯೆಯೂ ಇರುತ್ತದೆ ಎನ್ನುವುದನ್ನು ಮರೆಯಬಾರದು. ದ್ವೇಷ, ಸಿಟ್ಟು, ಅಸೂಯೆ ಎಲ್ಲವನ್ನೂ ಬಿಟ್ಟು ಕ್ಷಮಾಗುಣವನ್ನು ರೂಢಿಸಿ, ಪ್ರೀತಿಯನ್ನು ಹಂಚಿದರೆ ನಮ್ಮ ಶುದ್ಧತೆ, ಶಕ್ತಿ ಹೆಚ್ಚುತ್ತದೆ ಎಂದು ಕಿವಿಮಾತು ಹೇಳಿದರು.
ಭಾವನಾತ್ಮಕ ಅಂತರ:
ತೂಫಾನ್ ಬಂದರೆ ಕಿಟಕಿ ಮುಚ್ಚುತ್ತೇವೆ. ಕೋವಿಡ್ ಬಂದಿದ್ದಾಗ ಪರಸ್ಪರ ಅಂತರ ಇಡುವುದನ್ನು ರೂಢಿಸಿಕೊಂಡೆವು. ಅದೇ ರೀತಿ ಸಮಾಜದ ಇತರರ, ಪ್ರೀತಿಪಾತ್ರರ ಋಣಾತ್ಮಕ ಪಲ್ಲಟಗಳಿಗೆ ಭಾವನಾತ್ಮಕ ಅಂತರ ಇರಿಸಿದರೆ ನಿಮ್ಮನ್ನು ನೀವು ಉಳಿಸಿಕೊಳ್ಳಬಹುದು. ಹೀಗೆ ಅಂತರ ಇರಿಸಿಕೊಳ್ಳುವಾಗ ಅವರ ಮೇಲಿನ ಕಾಳಜಿ ಮರೆಯಬೇಡಿ. ಆಗ ನಿಮ್ಮ ಶಕ್ತಿ ಹೆಚ್ಚಿ ನಿಮ್ಮ ಪ್ರೀತಿಪಾತ್ರರು ಋಣಾತ್ಮಕತೆಯಿಂದ ಧನಾತ್ಮಕತೆಯೆಡೆಗೆ ಸಾಗುವುದನ್ನು ನೋಡುತ್ತೀರಿ ಎಂದರು.
ಕರ್ಮದ ಫಲ ಬಂದೇ ಬರಲಿದೆ:
ದೇವರು ಎಂದರೆ ಪ್ರೀತಿಯ ಮಹಾಸಾಗರ. ನಮ್ಮ ಪ್ರತಿಯೊಬ್ಬರ ವಿಧಿಗಳೂ ಪ್ರತ್ಯೇಕ. ನಾವು ಮಾಡುವ ಕರ್ಮ ನಮ್ಮ ವಿಧಿಯನ್ನು ನಿರ್ಧರಿಸುತ್ತದೆಯೇ ಹೊರತು ದೇವರು ನಮ್ಮ ವಿಧಿಯನ್ನು ಬರೆಯಲಾರ. ನಾವು ಕರ್ಮವೆಂಬ ಚೆಂಡನ್ನು ಎಸೆದರೆ ಅದರ ಫಲ ವಾಪಸ್ ಬಂದೇ ಬರುತ್ತದೆ. ಕರ್ಮದ ಫಲ ಯಾವತ್ತಾದರೂ ಬರಲೇಬೇಕು. ಅದು ಒಂದು ನಿಮಿಷವೇ ಇರಲಿ, ೫೦ ಸಂವತ್ಸರಗಳೇ ಇರಲಿ, ಒಳ್ಳೆಯ ಚೆಂಡನ್ನು ಎಸೆದರೆ ಅಷ್ಟೇ ಒಳ್ಳೆಯ ವಿಧಿ ದೊರೆಯುತ್ತದೆ. ಕೆಟ್ಟದ್ದು ಮಾಡಿದರೆ ವಿಧಿ ಅದಕ್ಕೆ ತಕ್ಕುದಾಗೇ ಇರುತ್ತದೆ ಎಂದು ಶಿವಾನಿ ಹೇಳಿದರು.
ನಿತ್ಯ ಕ್ಷಮಾಗುಣ:
ನಿಮಗೆ ಜನರು ಏನೇ ವ್ಯತಿರಿಕ್ತ ಮಾಡಿರಲಿ, ಕ್ಷಮೆ ನೀಡಿ. ಪ್ರತಿದಿನ ಮಲಗುವ ಮೊದಲು ಈ ಪ್ರಕ್ರಿಯೆ ನಡೆಯಲಿ. ಆಯಾ ದಿನ ನಮ್ಮ ಮನಸ್ಸನ್ನು ಈ ರೀತಿ ಸ್ವಚ್ಛಗೊಳಿಸಿ ಮಲಗುವುದನ್ನು ರೂಢಿಸಿಕೊಂಡರೆ ನೆಮ್ಮ, ಶಾಂತಿ ದೊರೆಯಲಿದೆ ಎಂದು ಅವರು ಕರೆ ನೀಡಿದರು.
ಮಂಗಳೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ. ವಿಶ್ವೇಶ್ವರಿ ಮತ್ತಿತರರು ಇದ್ದರು.