Ullal: ಹೆಜ್ಜೇನು ಗೂಡಿಗೆ ಬಡಿದ ಚೆಂಡು! ದಿಕ್ಕಾಪಾಲಾಗಿ ಓಡಿದ ಕ್ರಿಕೆಟ್ ಆಟಗಾರರು
Monday, February 5, 2024
ಉಳ್ಳಾಲ: ಕ್ರಿಕೆಟ್ ಟೂರ್ನಿಯೊಂದರಲ್ಲಿ ದಾಂಡಿಗನು ಹೊಡೆದ ಚೆಂಡು ತೆಂಗಿನ ಮರದಲ್ಲಿದ್ದ ಹೆಜ್ಜೇನು ಗೂಡಿಗೆ ಬಡಿದ ಪರಿಣಾಮ ಜೇನು ಹುಳಗಳು ಗುಂಪಾಗಿ ದಾಳಿ ನಡೆಸಿದ ಘಟನೆ ಉಳ್ಳಾಲ ಒಂಭತ್ತುಕೆರೆಯ ಅನಿಲ ಕಂಪೌಂಡ್ ಎಂಬಲ್ಲಿ ನಡೆದಿದ್ದು ಕ್ರಿಕೆಟ್ ಆಟಗಾರರೆಲ್ಲ ದಿಕ್ಕಾ ಪಾಲಾಗಿ ಓಡಿದ ಪರಿಣಾಮ ಟೂರ್ನಮೆಂಟ್ ಕೊನೆಗೆ ರದ್ದುಗೊಂಡಿದೆ.
ಆದಿತ್ಯವಾರದಂದು ಅನಿಲ ಕಂಪೌಂಡ್ ಮೈದಾನದಲ್ಲಿ ಕ್ರಿಕೆಟ್ ಟೂರ್ನಿ ನಡೆಯುತ್ತಿದ್ದ ಸಂದರ್ಭ ಎಸ್.ಆರ್.ಜಿ.ಟಿ. ತಂಡದ ಮಹೇಶ್ ಎಂಬ ದಾಂಡಿಗನು ಬಾಲನ್ನ ಹೆಜ್ಜೇನು ಗೂಡಿಗೆ ಹೊಡೆದಿದ್ದಾರೆ. ಈ ವೇಳೆ ಗೂಡಿನಿಂದ ಹೊರ ಬಂದ ಹುಳುಗಳ ಕಡಿತದ ದಾಳಿಯಿಂದ ಮಹೇಶ್ ಅವರು ತಪ್ಪಿಸಿಕೊಳ್ಳಲು ಮೈದಾನವಿಡೀ ಓಡಿದ್ದಾರೆ. ಉಳಿದ ಆಟಗಾರರನ್ನೂ ಹುಳುಗಳು ಬೆನ್ನಟ್ಟಿದ್ದು ಕ್ರಿಕೆಟ್ ಟೂರ್ನಿಯೇ ರದ್ದುಗೊಂಡಿದೆ.
ಘಟನೆಯಿಂದ ಕುತ್ತಾರು ನಿವಾಸಿ ಮಹೇಶ್ ಗಾಯಗೊಂಡಿದ್ದು, ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.