Ayodya: ಈಶ್ವರ್ ಮಲ್ಪೆ, ರವಿ ಕಟಪಾಡಿಗೆ ಅಯೋಧ್ಯಾ ಮಂಡಲೋತ್ಸವ ಪುರಸ್ಕಾರ

Ayodya: ಈಶ್ವರ್ ಮಲ್ಪೆ, ರವಿ ಕಟಪಾಡಿಗೆ ಅಯೋಧ್ಯಾ ಮಂಡಲೋತ್ಸವ ಪುರಸ್ಕಾರ


ಅಯೋಧ್ಯೆ: ರಾಮರಾಜ್ಯದ ಪರಿಕಲ್ಪನೆಯಲ್ಲಿ ನಿಸ್ಪೃಹವಾಗಿ ದೇಶದ ಒಳಿತಿನ ಕಾಯಕಕ್ಕೆ ತಮ್ಮನ್ನು ಅರ್ಪಿಸಿಕೊಂಡ ಉಡುಪಿಯ ಇಬ್ಬರು ಸಾಮಾಜಿಕ ಧುರೀಣರಿಗೆ ಮಂಗಳವಾರ ಅಯೋಧ್ಯೆಯಲ್ಲಿ ಮಂಡಲೋತ್ಸವ ಪುರಸ್ಕಾರದೊಂದಿಗೆ ರಾಮನ ಪ್ರಸಾದವಿತ್ತು ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅಭಿನಂದಿಸಿದರು.

ನದಿ, ಸಮುದ್ರಗಳಲ್ಲಿ ನೀರಿನ‌ ಸೆಳೆತಕ್ಕೆ ಸಿಲುಕಿ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದ ಸುಮಾರು ಒಂದು ಸಾವಿರದಕ್ಕೂ ಹೆಚ್ಚು ಜನರನ್ನು ಪ್ರಾಣಾಪಾಯದಿಂದ ಪಾರುಮಾಡಿದ ಜೀವರಕ್ಷಕ ಉಡುಪಿ ಮಲ್ಪೆಯ ಈಶ್ವರ್ ಹಾಗೂ ಶ್ರೀ ಕೃಷ್ಣ ಅಷ್ಟಮಿ, ಗಣೇಶ ಚತುರ್ಥಿ ಮೊದಲಾದ ಪರ್ವ ಸದರ್ಭಗಳಲ್ಲಿ ಆಕರ್ಷಕ ವೇಷ ತೊಟ್ಟು ಉತ್ಸವದ ವೈಭವಕ್ಕೆ ಮೆರುಗು ತುಂಬಿ ಅದರಲ್ಲಿ ಸಂಗ್ರಹವಾದ ಸುಮಾರು ಒಂದೂವರೆ ಕೋಟಿಗೂ ಮಿಗಿಲಾದ ಮೊತ್ತವನ್ನು ಬಡವರ ಚಿಕಿತ್ಸೆಗೆ ವೆಚ್ಚ ಮಾಡುತ್ತಿರುವ ದೀನಬಂಧು ರವಿ ಕಟಪಾಡಿಯವರಿಗೆ ಶ್ರೀರಾಮ ದೇವರಿಗೆ ನಡೆಸಲಾದ ಕಲಶಾಭಿಷೇಕದಲ್ಲಿ ತಲಾ ಒಂದು ಕೆ.ಜಿ. ತೂಕದ ಹಾಗೂ ತಲಾ 1ಲಕ್ಷ ರೂ. ಮೌಲ್ಯದ ರಜತ ಕಲಶವನ್ನು ಶ್ರೀರಾಮನ ಅನುಗ್ರಹ ಪ್ರಸಾದರೂಪದಲ್ಲಿ ನೀಡಿ ಅಭಿನಂದಿಸಲಾಯಿತು.

ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಮ್ಮ ನೇತೃತ್ವದಲ್ಲಿ ಅಯೋಧ್ಯೆ ರಾಮ ಮಂದಿರದಲ್ಲಿ ಸ್ವತಃ ಮುತುವರ್ಜಿ ವಹಿಸಿ ಈ ಇಬ್ಬರನ್ನು ವಿಮಾನದ ಮೂಲಕ ಶ್ರೀ ಮಠದ ವೆಚ್ಚದಲ್ಲೇ ಅಯೋಧ್ಯೆಗೆ ಕರೆಸಿ ಈ ವಿಶೇಷ ಪುರಸ್ಕಾರ ನೀಡಿದ್ದಾರೆ.

ಅಲ್ಲದೇ ಸಂಜೆ ನಡೆದ ಪಲ್ಲಕ್ಕಿ ಉತ್ಸವದಲ್ಲೂ ಇಬ್ಬರಿಗೂ ಶ್ರೀರಾಮ ದೇವರ ಪ್ರಸಾದ ನೀಡಿ ಇಬ್ಬರೂ ನಡೆಸಿದ ಲೋಕೋತ್ತರ ಕಾರ್ಯವನ್ನು ಕೊಂಡಾಡಿದರು.

ಈ ಸಂದರ್ಭ ಮಾಜಿ ಶಾಸಕ ಕೆ. ರಘುಪತಿ ಭಟ್, ಶ್ರೀಗಳ ಆಪ್ತರಾದ ವಿಷ್ಣು ಆಚಾರ್ಯ, ಕೃಷ್ಣ ಭಟ್, ಶ್ರೀನಿವಾಸ ಪ್ರಸಾದ್ ಮೈಸೂರು, ವಾಸುದೇವ ಭಟ್ ಪೆರಂಪಳ್ಳಿ, ಮಾಜಿ ನಗರಸಭಾ ಸದಸ್ಯ ಮಹೇಶ್ ಠಾಕೂರ್, ಸುವರ್ಧನ್ ನಾಯಕ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article