Mangalore: ಸರಕಾರದ ಹಸಿಹಸಿ ಸುಳ್ಳುಗಳನ್ನು ಜನತೆಗೆ ತಿಳಿಯಪಡಿಸುವ ಮೂಲಕ ಫ್ಯಾಸಿಸ್ಟ್ ಮೋದಿ ಸರಕಾರವನ್ನು ಕಿತ್ತೊಗೆಯಬೇಕು: ಸುನಿಲ್ ಕುಮಾರ್ ಬಜಾಲ್
ಮಂಗಳೂರು: ತನ್ನ ಹಿಂದುತ್ವದ ಗುಪ್ತಾ ಅಜೆಂಡಾವನ್ನು ಬಹಿರಂಗಪಡಿಸಿ ದೇಶದ ಪ್ರಜಾಪ್ರಭುತ್ವ ಜಾತ್ಯಾತೀತ ಪರಂಪರೆಗೆ ಕೊಡಲಿ ಪೆಟ್ಟು ನೀಡಲು ಹುನ್ನಾರ ನಡೆಸುವ ಕಾರ್ಪೊರೇಟ್ ಹಿಂದುತ್ವದ ಅಕ್ರಮ ಕೂಟವಾದ ನರೇಂದ್ರ ಮೋದಿ ಸರಕಾರವನ್ನು ಕಿತ್ತೊಗೆಯಬೇಕು. ಇಲ್ಲದಿದ್ದಲ್ಲಿ ದೇಶಕ್ಕೆ ಅಪಾಯ ಕಾದಿದೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಆತಂಕ ವ್ಯಕ್ತಪಡಿಸಿದರು.
ಅವರು ಮಾ.31 ರಂದು ಸಿಪಿಐಎಂ ನೇತೃತ್ವದಲ್ಲಿ ತೊಕ್ಕೋಟುನಲ್ಲಿ ಜರುಗಿದ ಮಂಗಳೂರು ವಿಧಾನಸಭಾ ಕ್ಷೇತ್ರ ಮಟ್ಟದ ರಾಜಕೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಅಚ್ಚೇದಿನ್ ಬರುವುದಾಗಿ, ವಿದೇಶದಿಂದ ಕಪ್ಪು ಹಣ ತರುವುದಾಗಿ ಅಧಿಕಾರದ ಗದ್ದುಗೆಯೇರಿದ ನರೇಂದ್ರ ಮೋದಿ ಸರಕಾರ, ಕಳೆದ 10 ವರ್ಷಗಳಲ್ಲಿ ಕಾರ್ಪೊರೇಟ್ ಪರ ಮಂತ್ರ ಜಪಿಸಿ, ಜನತೆಯ ಬದುಕನ್ನು ಸರ್ವನಾಶ ಮಾಡುವ ಮೂಲಕ ಅಚ್ಚೇದಿನ್ ಬಂದಿರುವುದು ಅಂಬಾನಿ ಅಧಾನಿಗಳಿಗೆ ಹೊರತು ದೇಶದ ಜನಸಾಮಾನ್ಯರಿಗಲ್ಲ ಎಂದು ಜಗಜ್ಜಾಹೀರಾಗಿದೆ. ಜನ್ ಧನ್, ಉಜ್ವಲ, ಆವಾಸ್, ಈ ಶ್ರಮ್, ಹೊಸ ಪಿಂಚಣಿ, ಜನೌಷಧಿ, ಮುದ್ರಾ, ಆಯುಷ್ಮಾನ್ ಮುಂತಾದ ಯೋಜನೆಗಳ ಮೂಲಕ ಹಸಿಹಸಿ ಸುಳ್ಳುಗಳನ್ನು ಪೋಣಿಸಿ ಜನತೆಯನ್ನು ಯಾಮಾರಿಸಿದ್ದೇ ಮೋದಿ ಸರ್ಕಾರದ ದೊಡ್ಡ ಸಾಧನೆಯಾಗಿದೆ ಎಂದರು.
ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸ್ರಷ್ಠಿಯ ಭರವಸೆಯನ್ನು ತೀರಾ ನಿರ್ಲಕ್ಷ್ಯದ ಪರಿಣಾಮವಾಗಿ ನಿರುದ್ಯೋಗ ಸಮಸ್ಯೆ ಗಂಭೀರ ಸ್ವರೂಪವನ್ನು ಪಡೆದಿದ್ದು, ಯುವಜನತೆಗೆ ಮಾರಕವಾಗಿ ಪರಿಣಮಿಸಿದೆ. ನಾ ಖಾವೂಂಗಾ ನಾ ಖಾನೇ ದೂಂಗಾ ಘೋಷಣೆ ಒಂದೆಡೆಯಾದರೆ, ಮತ್ತೊಂದು ಕಡೆ ರಫೆಲ್ ಯುದ್ಧ ವಿಮಾನ ಹಗರಣ, ವ್ಯಾಪಂ ಹಗರಣ, ಪಿಎಂ ಕೇರ್ಸ್ ನಿಧಿ ಹಗರಣ, ಚುನಾವಣಾ ಬಾಂಡ್ ಹಗರಣ ಸೇರಿದಂತೆ ಹಲವಾರು ಹಗರಣಗಳ ಮೂಲಕ ಲಕ್ಷಾಂತರ ಕೋಟಿ ರೂಗಳನ್ನು ಬಾಚುವ ಮೂಲಕ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇಂತಹ ಭ್ರಷ್ಟ, ಕೋಮುವಾದಿ ಸರಕಾರದ ವಿರುದ್ಧ, ದ.ಕ. ಜಿಲ್ಲೆಯ ಜನತೆ ಮತ ಚಲಾಯಿಸುವ ಮೂಲಕ ಇಂಡಿಯಾ ಕೂಟದ ಅಭ್ಯರ್ಥಿಯ ಗೆಲುವಿಗೆ ಸಹಕರಿಸಬೇಕು ಹಾಗೂ ಜಿಲ್ಲೆಯ ಅಭಿವೃದ್ಧಿ ಹಾಗೂ ಸೌಹಾರ್ದತಾ ಪರಂಪರೆಯ ಉಳಿವಿಗಾಗಿ ಜಿಲ್ಲೆಯ ಜನತೆ ಒಂದಾಗಿ ನಿಲ್ಲಬೇಕೆಂದು ಜಿಲ್ಲೆಯ ಜನತೆಗೆ ಕರೆ ನೀಡಿದರು.
ಮುಖ್ಯ ಅತಿಥಿ ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುಕುಮಾರ್ ತೊಕ್ಕೋಟು ಮಾತನಾಡಿ, ಕಾರ್ಮಿಕ ವರ್ಗದ ಕಾನೂನುಗಳನ್ನು ಸಂಹಿತೆಗಳನ್ನಾಗಿ ರೂಪಿಸಿ ದುಡಿಯುವ ಜನತೆಯ ಹಕ್ಕುಭಾದ್ಯತೆಗಳನ್ನೇ ಇಲ್ಲವಾಗಿಸಲು ಹಾಗೂ ಮತ್ತೆ ಕಾರ್ಮಿಕರನ್ನು ಗುಲಾಮರನ್ನಾಗಿಸುವ ಹುನ್ನಾರ ನಡೆಸಿದೆ. ಮೋದಿ ಸರಕಾರದ ಕರಾಳ ಶಾಸನದಿಂದಾಗಿ ಕೃಷಿ ರಂಗ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದ್ದು,ಲಕ್ಷಾಂತರ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ದಲಿತ ಆದಿವಾಸಿ, ಮಹಿಳೆಯರ ಹಾಗೂ ಅಲ್ಪಸಂಖ್ಯಾತರ ಬದುಕು ಕಳೆದ 10 ವರ್ಷಗಳಲ್ಲಿ ಅತ್ಯಂತ ದಾರುಣ ಸ್ಥಿತಿಯಲ್ಲಿದೆ. ಸ್ವಾತಂತ್ರ ಭಾರತದಲ್ಲಿ ಅತ್ಯಂತ ಕೆಟ್ಟ ಸರಕಾರವಾದ ಮೋದಿ ಷಾ ಕೂಟವನ್ನು ದೇಶದ ಎಲ್ಲಾ ವಿಭಾಗದ ಜನತೆ ಒಂದಾಗಿ ಸೋಲಿಸಬೇಕೆಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲೆಯ ಹಿರಿಯ ಕಮ್ಯುನಿಸ್ಟ್ ನೇತಾರ ಕೃಷ್ಣಪ್ಪ ಸಾಲ್ಯಾನ್ ಮಾತನಾಡಿ, ದೇಶದ ಅರ್ಥಿಕ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿದ ನರೇಂದ್ರ ಮೋದಿ ಸರಕಾರದ ಅವಧಿಯಲ್ಲಿ ದೇಶದ ಸಾಲ ಮೂರು ಪಟ್ಟು ಹೆಚ್ಚಳವಾಗಿದೆ. 2014ರಲ್ಲಿ ಪ್ರತೀ ಪ್ರಜೆಯ ಮೇಲೆ ರೂ.43,000 ರೂ. ಸಾಲವಿದ್ದರೆ, 2023ರಲ್ಲಿ ರೂ.1,10,000ಕ್ಕೆ ಏರಿಕೆ ಕಂಡಿದೆ. ಅಂದರೆ ಮೋದಿ ಆಡಳಿತದಲ್ಲಿ ಪ್ರತಿಯೊಬ್ಬರ ಸಾಲ 67,000೬೭ ರೂ.ಯಷ್ಟು ಹೆಚ್ಚಳವಾಗಿದೆ ಎಂದು ಹೇಳಿದರು.
ಸಿಪಿಐಎಂ ಉಳ್ಳಾಲ ತಾಲೂಕು ಕಾರ್ಯದರ್ಶಿ ಯು. ಜಯಂತ ನಾಯಕ್ ಸ್ವಾಗತಿಸಿ, ಸಿಪಿಐಎಂ ಜಿಲ್ಲಾ ನಾಯಕಿ ಪದ್ಮಾವತಿ ಶೆಟ್ಟಿ ವಂದಿಸಿದರು.


