Mangalore: ಅಕ್ರಮಗಳನ್ನೇ ನೀತಿಯನ್ನಾಗಿಸಿದ ಬಿಜೆಪಿಯನ್ನು ಸೋಲಿಸಲು ಜೆ. ಬಾಲಕೃಷ್ಣ ಶೆಟ್ಟಿ ಕರೆ

Mangalore: ಅಕ್ರಮಗಳನ್ನೇ ನೀತಿಯನ್ನಾಗಿಸಿದ ಬಿಜೆಪಿಯನ್ನು ಸೋಲಿಸಲು ಜೆ. ಬಾಲಕೃಷ್ಣ ಶೆಟ್ಟಿ ಕರೆ


ಮಂಗಳೂರು: ದೇಶದ ಅಧಿಕಾರ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಜನಸಾಮಾನ್ಯರ ಆಶೋತ್ತರಗಳನ್ನೆಲ್ಲಾ ಕಡೆಗಣಿಸಿ ಚುನಾವಣಾ ಬಾಂಡ್ ಮೂಲಕ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದೆ. ಮತ್ತು ಅಕ್ರಮ ದಾರಿಗಳ ಮೂಲಕ ವಿರೋಧ ಪಕ್ಷಗಳನ್ನು ವ್ಯವಸ್ಥಿತವಾಗಿ ಮುಗಿಸುವ ಸಂಚನ್ನು ರೂಪಿಸಿವೆ ಈ ಮೂಲಕ ಒಟ್ಟು ದೇಶದಲ್ಲಿ ಅಕ್ರಮಗಳನ್ನೇ ನೀತಿಯನ್ನಾಗಿಸಿರುವ ಬಿಜೆಪಿ ಪಕ್ಷವನ್ನು ಈ ಲೋಕಸಭಾ ಚುನಾವಣೆಯಲ್ಲಿ ಸೋಲಿಸಬೇಕೆಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ. ಬಾಲಕೃಷ್ಣ ಶೆಟ್ಟಿ ಕರೆ ನೀಡಿದರು. 

ಅವರು ಮಾ.೩೧ ರಂದು ನಾಸಿಕ್ ಬಂಗೇರ ಸಭಾಭವನದಲ್ಲಿ ನಡೆದ ಪ್ರಜಾಪ್ರಭುತ್ವ ಜಾತ್ಯಾತೀತತೆಯ ಉಳಿವಿಗಾಗಿ, ದ.ಕ. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ನಡೆದ ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರ ಮಟ್ಟದ ರಾಜಕೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಬಿಜೆಪಿ ಪಕ್ಷ ಬಂಡವಾಳಶಾಹಿಗಳ ಜೊತೆ ಅಪವಿತ್ರ ಮೈತ್ರಿಯ ಮೂಲಕ ದೇಶದ ಸಾರ್ವಜನಿಕ ಸಂಪತ್ತುಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಿದ್ದಲ್ಲದೆ ಇದ್ದ ಕಾರ್ಮಿಕ ಪರ ನೀತಿಗಳನ್ನು ರದ್ದುಗೊಳಿಸುವ ಮೂಲಕ ಸರ್ವಾಧಿಕಾರಿ ಧೋರಣೆಗಳನ್ನು ಜಾರಿಗೊಳಿಸಿದೆ. ಇನ್ನು ವರ್ಷಕ್ಕೆರಡು ಕೋಟಿ ಉದ್ಯೋಗಗಳ ಸೃಷ್ಟಿಸಲು ನೀಡಿದ ಭರವಸೆಯನ್ನು ಈವರೆಗೂ ಈಡೇರಿಸಲು ಸಾಧ್ಯವಾಗದೆ ಇರುವ ಉದ್ಯೋಗಳನ್ನು ಕಳಕೊಂಡು ಬೀದಿಗೆ ಬರುವಂತಹ ಆರ್ಥಿಕ ನೀತಿಗಳನ್ನು ಜಾರಿಗೊಳಿಸಿರುವುದೇ ಬಿಜೆಪಿ ಆಡಳಿತದ ಸಾಧನೆ. ದೇಶ ದಿವಾಳಿಗೊಂಡು ಜನ ಬದುಕಲು ಸಂಕಷ್ಟಪಡುತ್ತಿರುವ ಈ ಕಾಲದಲ್ಲಿ ಬಿಜೆಪಿ ಪಕ್ಷ ಈ ಬರುವ ಚುನಾವಣೆಯಲ್ಲೂ ಸೋಲಾಗದಿದ್ದಲ್ಲಿ ಈ ದೇಶದ ಜನಸಾಮಾನ್ಯರ ಬದುಕು ಸೋಲಲಿದೆ, ಜನರ ಬದುಕು ಅವರ ಆಶೋತ್ತರಗಳು ಗೆಲ್ಲಬೇಕಾದರೆ ಬಿಜೆಪಿ ಸೋಲಲೇ ಬೇಕಾಗಿದೆ ಎಂದರು.

ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ. ಕೃಷ್ಣಪ್ಪ ಕೊಂಚಾಡಿ ಮಾತನಾಡಿ, ದೇಶದಲ್ಲಿ ದ್ವೇಷವನ್ನೇ ಬಿತ್ತುವ ಮೂಲಕ ಮತೀಯ ರಾಜಕಾರಣ ಮಾಡಿದ್ದಲ್ಲದೆ, ದಲಿತ, ಆದಿವಾಸಿ ಮತ್ತು ಹಿಂದುಳಿದ ವರ್ಗಗಳ ವಿರೋಧಿಯಾಗಿ ವರ್ತಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ದೀರ್ಘಾವಧಿಯಿಂದ ಗೆಲ್ಲುತ್ತಾ ಬರುತ್ತಿರುವ ಬಿಜೆಪಿ ಪಕ್ಷ ಜಿಲ್ಲೆಯ ಅಭಿವೃದ್ಧಿಯಲ್ಲಿ ಯಾವೊಂದು ಕೊಡುಗೆ ನೀಡಲೂ ಸಾಧ್ಯವಾಗಿಲ್ಲ. ಜಿಲ್ಲೆಯ ಅಭಿವೃದ್ಧಿಯ ಕಡೆಗಣನೆಗೆ ಹಿಂದಿನ ಸಂಸದ ನಳಿನ್ ಕುಮಾರ್ ಕಟೀಲೊಬ್ಬರೇ ಹೊಣೆಯಲ್ಲ ಅದಕ್ಕೆಲ್ಲಾ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಪೂರ್ಣ ಹೊಣೆಹೊರಬೇಕು. ಜಿಲ್ಲೆಯಲ್ಲಿ ಹಿಂದುಳಿದ ವರ್ಗದ ಯುವಜನರನ್ನು ಶಿಕ್ಷಣ, ಉದ್ಯೋಗ, ಆರೋಗ್ಯದ ಹಕ್ಕಿನಿಂದ ವಂಚಿಸಿದ್ದಲ್ಲದೆ ಮತೀಯ ರಾಜಕಾರಣದ ಕಾಲಾಳುಗಳಾಗಿ ಬಳಸಿ ಬಲಿಪಡೆದಿರುವುದು ಈ ಜಿಲ್ಲೆಯ ಬಿಜೆಪಿ ಪಕ್ಷ ಮತ್ತು ಆರ್. ಎಸ್.ಎಸ್ ಎಂದು ಗೊತ್ತಿರಲಿ ಎಂದರು. 

ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ಬಿ.ಕೆ. ಇಮ್ತಿಯಾಜ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ರಾಜಕೀಯ ಸಮಾವೇಶದ ಅಧ್ಯಕ್ಷತೆಯನ್ನು ಭಾರತೀ ಬೋಳಾರ ವಹಿಸಿದ್ದರು. ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸಂತೋಷ್ ಬಜಾಲ್ ರಾಜಕೀಯ ಸಮಾವೇಶದ ನೇತೃತ್ವ ವಹಿಸಿ ನಿರೂಪಿಸಿದರು. ಪ್ರದೀಪ್ ಕುಲಾಲ್ ವಂದಿಸಿದರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article