Udupi: ಕಕ್ಕುಂಜೆ ಶ್ರೀ ಕಟ್ಟೆ ಮಹಾದೇವಿ ಅಮ್ಮನವರ ದೇವಳ ಹಾಗೂ ಕುಕ್ಕಿಕಟ್ಟೆ ಕುದ್ರುಚಾವಡಿ ಪಂಚ ಧೂಮಾವತಿ ದೈವಸ್ಥಾನದ ಪುನರ್ ಪ್ರತಿಷ್ಠೆ, ಬ್ರಹ್ಮ ಕಲಶೋತ್ಸವ, ವಾರ್ಷಿಕ ಚಂಡಿಕಾ ಯಾಗ ಸಂಪನ್ನ
ಉಡುಪಿ: ಇಲ್ಲಿನ ಸಂತೆಕಟ್ಟೆಯ ಶಿವಳ್ಳಿ ಗ್ರಾಮದ ಕಕ್ಕುಂಜೆ ಶ್ರೀ ಕಟ್ಟೆ ಮಹಾದೇವಿ ಅಮ್ಮನವರ ದೇವಸ್ಥಾನ ಹಾಗೂ ಕುಕ್ಕಿಕಟ್ಟೆ ಕುದ್ರುಚಾವಡಿ ಪಂಚಧೂಮಾವತಿ ಗಡುವಾಡು ದೈವಸ್ಥಾನದ ನವೀಕೃತ ತಾಮ್ರಮಯ ಆಲಯ ಸಮರ್ಪಣೆ ಪ್ರಯುಕ್ತ ‘ಪುನಃ ಪ್ರತಿಷ್ಠೆ’ ‘ಬ್ರಹ್ಮಕಲಶೋತ್ಸವ’ ಮತ್ತು ವಾರ್ಷಿಕ ‘ಚಂಡಿಕಾಯಾಗ’ ಮಹಾ ‘ಅನ್ನ ಸಂತರ್ಪಣೆ’ ಕಾರ್ಯಕ್ರಮವು ಮಾ.27 ರಿಂದ ಮಾ.30 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಕ್ಷೇತ್ರದ ತಂತ್ರಿ ವೇ.ಮೂ. ಪುತ್ತೂರು ಶ್ರೀಶ ತಂತ್ರಿಗಳ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಮಾ.27 ರಂದು ಬೆಳಿಗ್ಗೆ ಆದ್ಯಗಣಯಾಗ, ಪ್ರಾಯಶ್ಚಿತ ಹೋಮಾದಿಗಳು, ಪೂರ್ವಾಹ್ನ 11.35ಕ್ಕೆ ಸರಿಯಾಗಿ ಮಿಥುನ ಲಗ್ನದಲ್ಲಿ ಶ್ರೀ ‘ದೇವಿಯ ಪ್ರತಿಷ್ಠೆ,’ ‘ಧೂಮಾವತಿಯ ಪ್ರತಿಷ್ಠೆ’, ಪಂಚಾಮೃತ ಕಲಶಾಭಿಷೇಕ, ಸಂಜೆ 6 ಗಂಟೆಯಿಂದ ಸುದರ್ಶನ ಹೋಮ, ದಿಶಾ ಹೋಮ, ಮಂಟಪ ನಮಸ್ಕಾರ ನಡೆಯಿತು.
ಮಾ.28 ರಂದು ಬೆಳಿಗ್ಗೆ 8 ಗಂಟೆಯಿಂದ ಗಣಯಾಗ, ದುರ್ಗಾ ಹೋಮ, 11.30 ಕ್ಕೆ ಒದಗುವ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ಮಹಾದೇವಿ ಅಮ್ಮನವರಿಗೆ ಶತ ಅಷ್ಟೋತ್ತರ (108) ಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಪಂಚ ಧೂಮಾವತಿಗೆ ಪಂಚವಿಂಶತಿ (25) ಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ, ಪಲ್ಲ ಪೂಜೆ, ಮಧ್ಯಾಹ್ನ 12 ಗಂಟೆಯಿಂದ ಮಹಾ ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ 12.30 ಕ್ಕೆ ‘ಇಂಚರ’ ಮೆಲೊಡೀಸ್ ಹೆಬ್ರಿ ಇವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ. ಸಂಜೆ 6 ಗಂಟೆಯಿಂದ ಶ್ರೀ ಅಮ್ಮನವರ ಮತ್ತು ಧೂಮಾವತಿಯ ದರ್ಶನ ಸೇವೆ, ಪ್ರಸಾದ ವಿತರಣೆ ನಡೆಯಿತು.
ಮಾ.29 ರಂದು ಸಂಜೆ 6.30 ಕ್ಕೆ ‘ಶ್ರೀ ಗುರು ಕುಣಿತ ಭಜನಾ ಮಂಡಳಿ ಅಂಬಲಪಾಡಿ’ ಇವರಿಂದ ಕುಣಿತ ಭಜನೆ. ರಾತ್ರಿ 8 ಗಂಟೆಯಿಂದ ವಿಜಯ ಎನ್. ಸುವರ್ಣ ಸಾಂಸ್ಕೃತಿಕ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ರಾತ್ರಿ 8.30 ರಿಂದ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ‘ಭಕ್ತಿ ಸಂಗೀತ ಗಾನ ಸಂಭ್ರಮ’ ನಡೆಯಿತು.
ಮಾ.30 ರಂದು ಬೆಳಿಗ್ಗೆ 9 ಗಂಟೆಗೆ ಮಹಾ ಚಂಡಿಕಾಯಾಗ, ಮಧ್ಯಾಹ್ನ ಪೂರ್ಣಾಹುತಿ, ಪಲ್ಲ ಪೂಜೆ, 1 ಗಂಟೆಗೆ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಮಹಾ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ಹಾಗೂ ರಾತ್ರಿ 9.30 ರಿಂದ ಪಂಚ ಧೂಮಾವತಿ ಕೋಲ ಸೇವೆಯು ನಡೆಯಿತು.
ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿಯ ಮೊಕ್ತೇಸರರು, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರು, ಉತ್ಸವ ಸಮಿತಿಯ ಅಧ್ಯಕ್ಷರು, ಊರಿನ ಗುರಿಕಾರರು, ಸದಸ್ಯರು, ಅರ್ಚಕ ವೃಂದದವರು ಮತ್ತು ಊರ-ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.






