Mangalore: ಆಸಕ್ತಿಯೇ ಅಧ್ಯಯನಕ್ಕೆ ಮೂಲ ಪ್ರೇರಣೆ: ರೊನಾಲ್ಡ್ ಪಿಂಟೋ
ಮಂಗಳೂರು: ಆಸಕ್ತಿಯು ವಿದ್ಯಾರ್ಥಿಗಳನ್ನು ಅಧ್ಯಯನಾಸಕ್ತರನ್ನಾಗಿ ಮಾಡಿಸಿದರೆ, ನಿರಂತರ ಅಧ್ಯಯನದಿಂದ ಗುರಿತಲುಪಲು ಸಹಾಯ ಮಾಡುತ್ತದೆ ಎಂದು ವ್ಯಕ್ತಿತ್ವ ವಿಕಸನ ಸಂಸ್ಥೆಯ ನಿರ್ದೇಶಕ ಪ್ರೊ. ರೊನಾಲ್ಡ್ ಪಿಂಟೋ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ರಸಾಯನಶಾಸ್ತ್ರ ವಿಭಾಗ, ಆಂತರಿಕ ಗುಣಮಟ್ಟ ಖಾತರಿ ಕೋಶ, ಲಯನ್ಸ್ ಕ್ಲಬ್ ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಉನ್ನತ ಶಿಕ್ಷಣ ಮತ್ತು ರಸಾಯನಶಾಸ್ತ್ರ ಹಾಗೂ ಇತರೆ ವಿಜ್ಞಾನ ವಿಷಯಗಳಲ್ಲಿ ಉದ್ಯೋಗಾವಕಾಶಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸನೀಡಿದರು.
ವಿದ್ಯಾರ್ಥಿಗಳು ಕೇವಲ ವಿಷಯಾಸಕ್ತರಾದರೆ ಶಿಕ್ಷಕರು ಕೇವಲ ಅಷ್ಟರಮಟ್ಟಿಗೆ ಮಾತ್ರವೇ ಮಾಹಿತಿ ನೀಡುತ್ತಾರೆ. ಅದರ ಬದಲಾಗಿ ಬದುಕಿನಲ್ಲಿ ಮಹೋನ್ನತ ಗುರಿ ಇಟ್ಟುಕೊಂಡು ಹೆಚ್ಚಿನ ಅಧ್ಯಯನದಲ್ಲಿ ತೊಡಗಿಸಿಕೊಂಡಲ್ಲಿ ಶಿಕ್ಷಕರು ಮಾರ್ಗದರ್ಶಕರಾಗಿ ಬದಲಾಗುತ್ತಾರೆ. ಅಷ್ಟರ ಮಟ್ಟಿಗೆ ವಿದ್ಯಾರ್ಥಿಗಳು ಶಿಕ್ಷಕರಿಂದ ಜ್ಞಾನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಡಾ. ಸಿದ್ದರಾಜು ಎಂ.ಎನ್., ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಲಕ್ಷಣ್ ಹಾಗೂ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.
