Mangalore: ಸಿದ್ದು ಜತೆಗೆ ಸ್ಪೆಷಲ್ ಫ್ಲೈಟ್ ಹತ್ತಿದ ಬಾವಾ.. ಕಾಂಗ್ರೆಸ್ ವಲಯದಲ್ಲಿ ಚರ್ಚೆ
Saturday, March 16, 2024
ಮಂಗಳೂರು: ಎರಡು ದಿನಗಳ ಹಿಂದೆ ಉಡುಪಿಗೆ ಗ್ಯಾರಂಟಿ ಸಮಾವೇಶಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಪಾಸ್ ಹೋಗುವಾಗ ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಬಿ.ಎ. ಮೊಯಿದೀನ್ ಬಾವಾ ಅವರನ್ನು ತಮ್ಮ ಜೊತೆಗೆ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಕರೆದೊಯ್ದಿರುವುದು ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ವಂಚಿತರಾದ ಕೋಪದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದ ಬಾವಾ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚನೆಯಾದಾಗ ಮರಳಿ ಕಾಂಗ್ರೆಸ್ ಸೇರುವ ಇಂಗಿತವನ್ನು ಆಪ್ತರಲ್ಲಿ ವ್ಯಕ್ತಪಡಿಸಿದ್ದರು. ಆದರೆ ಬಾವಾ ಸೇರ್ಪಡೆ ಹಾದಿ ಸುಗಮವಾಗಿರಲಿಲ್ಲ. ಆದರೆ ಈಗ ಒಂದುಕಾಲದ ಗಳಸ್ಯ ಕಂಠಸ್ಯ ಮಿತ್ರ ಸಿದ್ದರಾಮಯ್ಯ ಜೊತೆಯಲ್ಲಿ ವಿಶೇಷ ವಿಮಾನದಲ್ಲಿ ಪ್ರಯಾಣಿಸಿರುವುದು ಬಾವಾ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತಿಗೆ ಪುಷ್ಠಿ ಸಿಕ್ಕಂತಾಗಿದೆ.
ಸಿದ್ದರಾಮಯ್ಯ, ಬಾವಾ ಜೊತೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಹೋಗಿದ್ದು ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಭೇಟಿಯಾಗಿ ಬಂದಿದ್ದಾರೆ. ಈ ಕುರಿತ ಫೋಟೋ, ವಿಡಿಯೋಗಳು ಕಾಂಗ್ರೆಸ್ ಗುಂಪುಗಳಲ್ಲಿ ಹರಿದಾಡುತ್ತಿದೆ. ಬಾವಾ ಶೀಘ್ರದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗುತ್ತಿದ್ದು ಎಲ್ಲಿ ಯಾವಾಗ ಎನ್ನುವುದು ಖಚಿತಗೊಂಡಿಲ್ಲ.